2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ “ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50 ಸಾವಿರ ರೂ ನೀಡಲಾಗುವುದು” ಎಂದು ಸರ್ಕಾರ ಪ್ರಕಟಿಸಿದೆ.
ಅದರಂತೆ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ. 50 ಸಾವಿರ ನೀಡುವ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಲಾಗಿದೆ. ಹಾಗೆಯೇ ಕೊಡಗು ಜಿಲ್ಲೆಗೆ 40 ಗುರಿ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಧು-ವರರು ಕರ್ನಾಟಕ ರಾಜ್ಯಕ್ಕೆ ಸೇರಿದ ಅಲ್ಪಸಂಖ್ಯಾತರ ಸಮುದಾಯಗಳಿಗೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ಸೇರಿದವರಾಗಿರಬೇಕು. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಿರತಕ್ಕದ್ದು. ಈ ಸೌಲಭ್ಯ ಪಡೆಯುವ ವಧುವಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷಗಳು, ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ವಯಸ್ಸು ಆಗಿರತಕ್ಕದ್ದು. ಈ ಯೋಜನೆಯಡಿ ಸಹಾಯಧನ ಪಡೆಯಲು ವಧು-ವರರ ವಾರ್ಷಿಕ ಆದಾಯವು ರೂ.2.50 ಲಕ್ಷಗಳು ಮತ್ತು ಒಟ್ಟಾರೆಯಾಗಿ ರೂ.5 ಲಕ್ಷಗಳನ್ನು ಮೀರತಕ್ಕದ್ದಲ್ಲ. ವರನಿಗೆ ಈಗಾಗಲೇ ಜೀವಂತ ಪತ್ನಿಯಿದ್ದಲ್ಲಿ ಅಥವಾ ವದುವಿಗೆ ಜೀವಂತ ಪತಿ ಇದ್ದಲ್ಲಿ ಈ ಯೋಜನೆಯು ಅನ್ವಯಿಸುವುದಿಲ್ಲ.ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನಾ ಆಜಾದ್ ಭವನ, ಎಫ್.ಎಂ.ಸಿ.ಕಾಲೇಜು ಹತ್ತಿರ, ಮಡಿಕೇರಿ ದೂರವಾಣಿ 9972799091, ತಾಲ್ಲೂಕು ಮಾಹಿತಿ ಕೇಂದ್ರ ವಿರಾಜಪೇಟೆ ದೂರವಾಣಿ ಸಂಖ್ಯೆ: 9900731037, ತಾಲ್ಲೂಕು ಮಾಹಿತಿ ಕೇಂದ್ರ ಸೋಮವಾರಪೇಟೆ ದೂರವಾಣಿ ಸಂಖ್ಯೆ: 8548068519 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಆರ್ ಅವರು ತಿಳಿಸಿದ್ದಾರೆ.