ಪದೋನ್ನತಿ ನಿರೀಕ್ಷೆಯಲ್ಲಿರುವ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ

ಬೆಂಗಳೂರು: ಪದವಿ ಪೂರ್ಣಗೊಳಿಸಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಪದೋನ್ನತಿ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಡೆದ ಶಿಕ್ಷಕ ಮತ್ತು ಪದವೀಧರ ಕ್ಷೇತ್ರ ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2020 ರವರೆಗಿನ ಖಾಲಿ ಹುದ್ದೆಗಳ ಭರ್ತಿಗೆ ವೇತನಾನುದಾನ ಅಧಿನಿಯಮಕ್ಕೆ ತಿದ್ದುಪಡಿ ತರಬೇಕಿದೆ. ಕಾರ್ಯಭಾರ ಕೊರತೆ ಇರುವುದರಿಂದ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜಿಸುವ ಕುರಿತು ಈಗಾಗಲೇ ಸಮಿತಿ ನೇಮಕ ಮಾಡಲಾಗಿದೆ. ಸಮಿತಿಯ ವರದಿಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹ ಶಿಕ್ಷಕರಿಗೆ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಪರೀಕ್ಷೆ ನಡೆಸಬೇಕೆಂಬ ನಿಯಮಕ್ಕೆ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ನ್ಯಾಯ ಸಮ್ಮತವಲ್ಲ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಬಿಕಾಂ ಬಿಎಡ್ ಪದವೀಧರರ ಪರಿಗಣಿಸಲು ನಿಯಮದಲ್ಲಿ ಅವಕಾಶವಿಲ್ಲದ ಕಾರಣ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ತಿಳಿಸಿದ್ದಾರೆ.

ಸಭೆಯಲ್ಲಿ ರಾಜ್ಯದ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಮುಖ ಸುಧಾರಣೆ ಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.

ಪದವಿ ಹೊಂದಿರುವ ಪಿ.ಎಸ್.ಟಿ ಶಿಕ್ಷಕರನ್ನು ಜಿ.ಪಿ.ಟಿ ಶಿಕ್ಷಕರಾಗಿ (6-8) ಪದೋನ್ನತಿ ನೀಡುವ ಕುರಿತು.

ಸ್ನಾತಕೋತ್ತರ ಪದವಿ ಹೊಂದಿದ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಉಪನ್ಯಾಸಕರ ಹುದ್ದೆಗೆ ಬಡ್ತಿ, ನೀಡುವ ಕುರಿತು.

ಪದೋನ್ನತಿ ಪಡೆದ ಶಿಕ್ಷಕರಿಗೆ 15, 20 ಹಾಗೂ 25 ವರ್ಷಗಳಿಗೆ ನೀಡುವ ವೇತನ ಶ್ರೇಣಿಗಳನ್ನು ಪಡೆಯುವ ಬಗ್ಗೆ.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ 2020ರ ವರೆಗಿನ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಮಾಡುವುದು.

ಅನುದಾನಿತ ಕಾಲೇಜು ಉಪನ್ಯಾಸಕರುಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜನೆ ಮಾಡುವ ಕುರಿತು.

ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2006ರ ನಂತರ ನೇಮಕಗೊಂಡು ಅನುದಾನಕ್ಕೆ ಒಳಪಟ್ಟ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ಒದಗಿಸುವ ಕುರಿತು.

ಅನುದಾನಿತ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದ ಆಧಾರದ ಮೇಲೆ ಶಿಕ್ಷಕರ ವಿರುದ್ಧದ ಕ್ರಮಗಳನ್ನು ಕೈಗೊಳ್ಳದಿರುವ ಕುರಿತು.

ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ ಬೇರ್ಪಟ್ಟಿರುವ ಪದವಿಪೂರ್ವ ಕಾಲೇಜುಗಳಲ್ಲಿನ ಖಾಲಿ ಹುದ್ದೆ ಭರ್ತಿ ಕುರಿತು.

ಸಿ.ಬಿ.ಎಸ್.ಸಿ ಮಾದರಿಯ ಪರೀಕ್ಷಾ ಪದ್ಧತಿಯನ್ನು ಜಾರಿಗೊಳಿಸುವ ಕುರಿತು.

Lesson Based Assessment ಪದ್ಧತಿಯನ್ನು ಪುನರ್ ಪರಿಶೀಲಿಸುವುದು ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ 1997-98 ಮತ್ತು 1998-99ರಲ್ಲಿ ನೇಮಕಾತಿ ಹೊಂದಿ ಕರ್ತವ್ಯಕ್ಕೆ ಹಾಜರಾಗಿರುವ ಕೃಪಾಂಕ ರಹಿತ ಪ್ರೌಢಶಾಲಾ ಶಿಕ್ಷಕರಿಗೆ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನುಷ್ಠಾನಗೊಳಿಸಿದಂತೆ ಸೇವಾ ಹಿರಿತನ ಹಾಗೂ ವೇತನ ಪರಿಷ್ಕರಣೆ ಮಾಡುವ ಕುರಿತು.

ಕಟ್ಟಡ ಶಿಥಿಲಗೊಂಡಿರುವ, ಖಾಸಗಿ ಅನುದಾನ ರಹಿತ ಶಾಲೆಯನ್ನು ಕನಿಷ್ಠ 2 ವರ್ಷಗಳ ಕಾಲ ತಾತ್ಕಾಲಿಕವಾಗಿ ಸ್ಥಳಾಂತರಿಸುವುದು ಸೇರಿದಂತೆ ಇನ್ನೂ ಹಲವು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಗತ್ಯ ಸಲಹೆಗಳನ್ನು ಪಡೆದು, ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.

ಸಭೆಯಲ್ಲಿ ವಿಧಾನಪರಿಷತ್ ಶಾಸಕರಾದ ಶಶೀಲ್ ಜಿ. ನಮೋಶಿ, ಎಸ್.ಎಲ್ ಭೋಜೇಗೌಡ, ಎಸ್.ವಿ ಸಂಕನೂರು, ಪುಟ್ಟಣ್ಣ, ಡಾ.ಧನಂಜಯ್ ಸರ್ಜಿ, ಹನಮಂತ ಆರ್ ನಿರಾಣಿ, ಮಧು ಮಾದೇಗೌಡ, ರಾಮೋಜಿ ಗೌಡ, ಡಿ.ಟಿ ಶ್ರೀನಿವಾಸ್, ವಿವೇಕಾನಂದ ಶಿಕ್ಷಣ ಇಲಾಖೆಯ ಆಯುಕ್ತ ತ್ರಿಲೋಕ ಚಂದ್ರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read