ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಹಾಲಿನ ಪುಡಿ ಬದಲಿಗೆ ಸುವಾಸನೆ ಭರಿತ ಹಾಲು ನೀಡಲು ಬೆಂಗಳೂರು ಹಾಲು ಒಕ್ಕೂಟ ನಿರ್ಧರಿಸಿದೆ.
ಪ್ರಾಯೋಗಿಕವಾಗಿ ಬೆಂಗಳೂರು ಮಿಲ್ಕ್ ಯೂನಿಯನ್ ವ್ಯಾಪ್ತಿಯ ಬೆಂಗಳೂರು ದಕ್ಷಿಣ(ರಾಮನಗರ), ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಸುವಾಸನೆ ಭರಿತ ಹಾಲು ವಿತರಿಸಲು ನಿರ್ಧರಿಸಿದ್ದು, ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ರಾಜ್ಯವ್ಯಾಪಿ ವಿಸ್ತರಿಸುವ ಚಿಂತನೆ ಇದೆ.
ಬುಧವಾರ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರೊಂದಿಗೆ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ಈ ಕುರಿತಾಗಿ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ಪ್ರಸ್ತುತ ಈ ಮೂರು ಜಿಲ್ಲೆಗಳ ಶಾಲಾ ಮಕ್ಕಳಿಗೆ ಅಂದಾಜು 250 ಟನ್ ಹಾಲಿನ ಪುಡಿ ಪೂರೈಕೆ ಮಾಡಲಾಗುತ್ತಿದೆ. ಈ ಪುಡಿಯನ್ನು ಶಾಲಾ ಶಿಕ್ಷಕರು ನೀರಿನಲ್ಲಿ ಬೆರೆಸಿ ಮಕ್ಕಳಿಗೆ ತಲಾ 200 ಗ್ರಾಂ ಹಾಲು ಮಾಡಿ ಕೊಡಬೇಕಿದೆ. ಕೆಲವು ಕಡೆ ಶುದ್ಧ ನೀರು ಬಳಕೆಯಾಗುತ್ತಿಲ್ಲ ಎನ್ನುವ ಆರೋಪವಿದೆ. ಅಲ್ಲದೇ, ಹಾಲಿನ ಪುಡಿಯನ್ನು ಹೋಟೆಲ್, ಟೀ ಅಂಗಡಿಗಳಿಗೆ ಮಾರಾಟ ಮಾಡುವುದು, ಮನೆಗೆ ತೆಗೆದುಕೊಂಡು ಹೋಗುವ ಬಗ್ಗೆ ದೂರುಗಳು ಬಂದಿವೆ. ಪುಡಿಯಿಂದ ಮಾಡಿದ ಹಾಲನ್ನು ಅನೇಕ ಮಕ್ಕಳು ಸೇವಿಸಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಪರಿಶುದ್ಧವಾದ ಹಾಲನ್ನು ಬಾದಾಮ್, ಪಿಸ್ತಾ, ಮಾವು, ಕಿತ್ತಳೆ, ಪೈನಾಪಲ್, ಬಾಳೆಹಣ್ಣು ಸೇರಿ 10 ಬಗೆಯ ಸುವಾಸನೆ ಭರಿತ ಹಾಲು ಸಿದ್ಧಪಡಿಸಬಹುದು.
ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳು ಈಗಾಗಲೇ ಸುವಾಸನೆ ಭರಿತ ಹಾಲು ಖರೀದಿಸಿ ಶಾಲಾ ಮಕ್ಕಳಿಗೆ ಪೂರೈಸುತ್ತಿವೆ. ರಾಜ್ಯದಲ್ಲಿ ಅದನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ತೃಪ್ತಿ ಹೆಸರಲ್ಲಿ ಒಂದು ಲೀಟರ್ ಪ್ಯಾಕಲ್ಲಿ ಸುವಾಸನೆ ಭರಿತ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಇದೇ ಹಾಲನ್ನು ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ಯಾಕ್ ಮಾಡಿ ಪೂರೈಕೆ ಮಾಡಲು ಚಿಂತನೆ ಇದೆ. ಇದರಲ್ಲಿ ಯಾವುದೇ ಕಲಬೆರಕೆಗೆ ಅವಕಾಶ ಇರುವುದಿಲ್ಲ. ಹಾಲಿನ ಪುಡಿ ದುರ್ಬಳಕೆ ತಡೆಯಲು ಸಾಧ್ಯವಾಗಲಿದೆ. ಪ್ರತಿದಿನ ಮಕ್ಕಳಿಗೆ ವಿವಿಧ ಬಗೆಯ ಸುವಾಸನೆ ಭರಿತ ಹಾಲು ನೀಡಿದರೆ ಅದನ್ನು ಕುಡಿಯಬಹುದು. ಹಾಲಿನ ಪುಡಿಗೆ ನೀಡುತ್ತಿರುವ ಹಣದಲ್ಲಿಯೇ ಈ ಯೋಜನೆ ಮುಂದುವರಿಸಬಹುದು ಎನ್ನಲಾಗಿದೆ.