ಬೆಂಗಳೂರು: ಶಾಲೆಗಳಲ್ಲಿ ಮಕ್ಕಳ ಆಟದ ಅವಧಿ ಕಡಿತಗೊಳಿಸದಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಸಮಯದಲ್ಲಿ ಮಕ್ಕಳಿಗೆ ನಿಗದಿಪಡಿಸಿದ ಆಟದ ಅವಧಿಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸದಂತೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
ಎಸ್ಎಸ್ಎಲ್ಸಿ ಯಲ್ಲಿ ಉತ್ತಮ ಫಲಿತಾಂಶ ನೀಡುವ ಉದ್ದೇಶದಿಂದ ಹತ್ತನೇ ತರಗತಿ ಮಕ್ಕಳ ಆಟದ ಸಮಯ ಕಡಿತಗೊಳಿಸಲಾಗುತ್ತಿದೆ ಎನ್ನುವ ದೂರುಗಳನ್ನು ಆಧರಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ಸೂಚನೆ ನೀಡಿದ ಶಿಕ್ಷಣ ಇಲಾಖೆ ಆಟದ ಅವಧಿ ಕಡಿತಗೊಳಿಸಿದಂತೆ ತಿಳಿಸಿದೆ.
ಆಟ, ಕಲೆ ಮತ್ತು ಇನ್ನಿತರ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವೈಯಕ್ತಿಕ ವಿಕಾಸದ ಅವಿಭಾಜ್ಯ ಅಂಗವಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಆಟ ಮಕ್ಕಳ ಹಕ್ಕು. ಅದನ್ನು ನಿರ್ಬಂಧಿಸುವುದು ಹಕ್ಕಿನ ಉಲ್ಲಂಘನೆಯಾಗುತ್ತದೆ. ಅಲ್ಲದೇ ಆಟದ ಸಮಯ ಕಡಿತಗೊಳಿಸುವುದರಿಂದ ಮಕ್ಕಳ ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಶಾಲಾ ಸಮಯದಲ್ಲಿ ಮಕ್ಕಳಿಗೆ ನಿಗದಿಪಡಿಸಿದ ಆಟದ ಅವಧಿಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಎಂದು ತಿಳಿಸಲಾಗಿದೆ.
