ಬೆಂಗಳೂರು: ಮುಂದಿನ 15 ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿ ಖಾತಾ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಪಂಚಾಯತ್ ರಾಜ್ ಕಾಯ್ದೆಗೆ ಕಳೆದ ಅಧಿವೇಶನದಲ್ಲಿ ತಿದ್ದುಪಡಿ ತರಲಾಗಿದೆ. ರಾಜ್ಯಪಾಲರ ಅನುಮೋದನೆಗೆ ಬಾಕಿ ಇದ್ದ ಕಾರಣ ಇ ಸ್ವತ್ತು ತಂತ್ರಾಂಶದಡಿ ಗ್ರಾಮೀಣ ಭಾಗದಲ್ಲಿ ಬಿ ಖಾತಾ ನೀಡುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಕರೆಯಲಾಗಿದೆ. 28 ಆಕ್ಷೇಪಣೆ ಸಲ್ಲಿಕೆಯಾಗಿದ್ದು, ಅವುಗಳನ್ನು ಪರಿಶೀಲಿಸಿ 15 ದಿನದಲ್ಲಿ ಬಿ ಖಾತಾ ವಿತರಿಸಲು ಸಮಗ್ರ ನಿಯಮ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ಒಂದೂವರೆ ತಿಂಗಳಲ್ಲಿ 11 ಬಿ ಖಾತಾದ ಸಾಫ್ಟ್ವೇರ್ ಸರಿಪಡಿಸಲಾಗುವುದು. ಇಡೀ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ 2237 ಕೋಟಿ ರೂ. ತೆರಿಗೆ ಸಂಗ್ರಹಿಸಿದ್ದು, ಕೆಲವು ನಿಯಮ ಮತ್ತು ತಿದ್ದುಪಡಿ ತಂದಲ್ಲಿ ಇನ್ನೂ ಸಾವಿರಾರು ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ. ಅದನ್ನು ಗ್ರಾಮ ಪಂಚಾಯಿತಿಗಳ ಮೂಲಸೌಕರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.