ಬೆಂಗಳೂರು : (ಜುಲೈ 10) ಸೋಮವಾರ ನಾಳೆ ಸಂಜೆ 5 ಗಂಟೆಗೆ ಅನ್ನಭಾಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಅಕ್ಕಿ ಬದಲು ಹಣ ನೀಡುವ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ.
ನಾಳೆ ಸಂಜೆ ಸಿಎಂ ಸಿದ್ದರಾಮಯ್ಯರವರು ಅಕ್ಕಿ ಬದಲು ಹಣ ನೀಡುವ ಯೋಜನೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ಎಲ್ಲ ಬಿಪಿಎಲ್ ಕಾರ್ಡುದಾರರ ಖಾತೆಗೆ ತಲಾ 170 ರೂ. ಹಣ ಪಾವತಿಯಾಗಲಿದೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸಲು ಅಕ್ಕಿ ಲಭ್ಯವಿಲ್ಲದ ಕಾರಣ 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ನೀಡಲಾಗುತ್ತಿದ್ದು, ಅಕ್ಕಿ ದೊರೆತ ನಂತರ ಅಕ್ಕಿಯನ್ನು ವಿತರಿಸಲಾಗುತ್ತದೆ. ಸದ್ಯದ ಮಟ್ಟಿಗೆ 5 ಕೆಜಿ ಅಕ್ಕಿಯ ಹಣ ಜನರ ಖಾತೆಗೆ ವರ್ಗಾವಣೆಯಾಗಲಿದೆ.
ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಅಕ್ಕಿ ಪಡೆದವರ ಖಾತೆಗೆ ಮಾತ್ರ ಹಣ ಜಮಾ ಮಾಡಲು ಚಿಂತನೆ ನಡೆಸಲಾಗಿದೆ. ಜೂನ್ ನಲ್ಲಿ 1,28,23,868 ಕುಟುಂಬಗಳ ಪೈಕಿ 1,17,29,296 ಕುಟುಂಗಳು ಅಕ್ಕಿ ಪಡೆದಿವೆ. ಉಳಿದ 10.94 ಲಕ್ಷ ಬಿಪಿಎಲ್ ಕುಟುಂಬಗಳು ಪಡಿತರ ಅಕ್ಕಿ ಪಡೆದಿರಲಿಲ್ಲ. 10.94 ಲಕ್ಷ ಕುಟುಂಬ ಅಂದರೆ ಅಂದಾಜು 20 ಲಕ್ಷ ಜನ ಅಕ್ಕಿ ಪಡೆದುಕೊಂಡಿಲ್ಲ.
20 ಲಕ್ಷ ಜನರಿಗೆ ಹಣ ಹಾಕದಿದ್ದರೆ 76 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಕೆಲವರು ಬಿಪಿಎಲ್ ಕಾರ್ಡ್ ಹೊಂದುವ ಉದ್ದೇಶದಿಂದ ಪಡಿತರ ಪಡೆಯುವುದಿಲ್ಲ. ಉಚಿತ ಆರೋಗ್ಯ ಸೇವೆ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ, ಹೆಚ್ಚುವರಿ 5 ಕೆಜಿ ಅಕ್ಕಿಗೆ ಹಣ ನೀಡುವುದು ಅನಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಳೆದ 3 ತಿಂಗಳಿಂದ 5,37,213 ಬಿಪಿಎಲ್ ಕುಟುಂಬಸ್ಥರು ಅಕ್ಕಿ ಪಡೆದಿಲ್ಲ. ಹೀಗಾಗಿ ಅಕ್ಕಿ ಪಡೆಯದವರಿಗೆ ಹಣ ನೀಡದಿರಲು ಆಹಾರ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.