ಬೆಂಗಳೂರು: ಪಿಎಸ್ಐ ಹುದ್ದೆಗೆ ಆಯ್ಕೆಯಾದ 402 ಮಂದಿಗೆ 15ರಿಂದ 20 ದಿನದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಬಿ.ವೈ. ವಿಜಯೇಂದ್ರ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ 402 ಪಿಎಸ್ಐ ಹುದ್ದೆಗಳ ನೇಮಕಾತಿ ಸಂಬಂಧ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ 15 ರಿಂದ 20 ದಿನದೊಳಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಹೇಳಿದ್ದಾರೆ. 2021 ನೇ ಸಾಲಿನಲ್ಲಿ 545 ಮತ್ತು 402 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿತ್ತು. 545 ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ಇದು ಬಗೆಹರಿಯುವವರೆಗೂ 402ಪಿಎಸ್ಐ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಎದುರಾದ ಕಾನೂನಾತ್ಮಕ ಮತ್ತು ಎಲ್ಲಾ ರೀತಿಯ ಸಮಸ್ಯೆ ಬಗೆಹರಿಸಿ 545 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಮೂರು ತಿಂಗಳಿಂದ ತರಬೇತಿ ಪಡೆಯುತ್ತಿದ್ದಾರೆ. 402 ಪಿಎಸ್ಐ ನೇಮಕಾತಿ ಪೈಕಿ 393 ಅಭ್ಯರ್ಥಿಗಳ ಸಿಂಧುತ್ವ, ವೈದ್ಯಕೀಯ ಪರೀಕ್ಷೆ, ದಾಖಲಾತಿ ಪರಿಶೀಲನೆ ಪೂರ್ಣಗೊಂಡಿದ್ದು, ಉಳಿದ ಅಭ್ಯರ್ಥಿಗಳ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ 15 ರಿಂದ 20 ದಿನದೊಳಗೆ 402 ಮಂದಿಗೂ ನೇಮಕಾತಿ ಆದೇಶ ನೀಡಲಾಗುವುದು ಎಂದು ಹೇಳಿದ್ದಾರೆ.