ಬೆಂಗಳೂರು: ರಾಜಧಾನಿ ಬೆಂಗಳೂರು ಬಳಿಕ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಅಥವಾ ಅದಕ್ಕೆ ಸಮನಾದ ಖಾತಾ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿಯೇ ಈ ಕುರಿತ ಪ್ರಸ್ತಾವನೆ ಚರ್ಚೆಗೆ ಬರುವ ಸಾಧ್ಯತೆ ಇದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬಿ ಖಾತಾ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ 2024ರ ಸೆಪ್ಟೆಂಬರ್ 30ರವರೆಗೆ ಬಿಬಿಎಂಪಿ ನೀಡಿರುವ ಎಲ್ಲಾ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಅಥವಾ ಅದಕ್ಕೆ ಸಮಾನವಾದ ಕಾನೂನುಬದ್ಧ ಖಾತಾ ನೀಡಲು ಕಳೆದ ಸಂಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಿ ಖಾತಾ ನೀಡುವ ಯೋಜನೆ ಜಾರಿ ಮಾಡಲಾಗಿದ್ದು ಅದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೂ ಅನ್ವಯಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಸಚಿವ ಈಶ್ವರ್ ಖಂಡ್ರೆ ನೇತೃತ್ವದ ಉಪ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಸರ್ಕಾರಕ್ಕೆ ಶಿಫಾರಸು ಮಾಡಲಿದ್ದು, ಬರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎನ್ನಲಾಗಿದೆ.