ಬೆಂಗಳೂರು : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇಂದಿನಿಂದ ಮನೆ ಬಾಗಿಲಿಗೆ ಇ- ಖಾತಾ ಅಭಿಯಾನ ಆರಂಭವಾಗಲಿದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ತಾಪ್ತಿಯಲ್ಲಿರುವ ಮನೆಗಳಿಗೆ ನಾನು ಖುದ್ದಾಗಿ ತೆರಳಿ, ಇ- ಖಾತಾ ವಿತರಿಸಿ, ಮನೆ-ಮನೆಗೆ ಖಾತಾ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆನು. ಜುಲೈ 1ರಿಂದ ಇ- ಖಾತಾ ಆಂದೋಲನ ನಡೆಯಲಿದ್ದು, ತಮ್ಮ ಆಸ್ತಿ ದಾಖಲೆಗಳನ್ನು ನೀಡಿ ಇ- ಖಾತಾ ಮಾಡಿಸಿಕೊಳ್ಳಿ. ನಿಮ್ಮ ಖಾತಾ, ನಮ್ಮ ಗ್ಯಾರಂಟಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಯಾವುದೇ ವಂಚನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಇ- ಖಾತಾ ಯೋಜನೆಯನ್ನು ಜಾರಿಗೊಳಿಸಿದ್ದೇವೆ. 25 ಲಕ್ಷ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಬೃಹತ್ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ. ಈ ರೀತಿಯ ಅನೇಕ ಜನಪರ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ಈಗಾಗಲೇ 5 ಲಕ್ಷಕ್ಕೂ ಅಧಿಕ ಖಾತೆಗಳು ಡಿಜಿಟಲೀಕರಣಗೊಂಡಿದೆ. ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಇತ್ತೀಚೆಗೆ 1,11,111 ತಾಂಡಾ, ಬುಡಕಟ್ಟು ಜನರಿಗೆ, ಆರನೇ ಭೂ ಗ್ಯಾರಂಟಿ ಮೂಲಕ ಭೂಮಿ ದಾಖಲೆಗಳನ್ನು ಉಚಿತವಾಗಿ ಹಂಚಿದ್ದೇವೆ. ಭಾರತ ಸರ್ಕಾರವು ಕೊಡುವ ಇ- ಆಡಳಿತ ಗೋಲ್ಡನ್ ಅವಾರ್ಡ್ಗೂ ಇ- ಖಾತಾ ಭಾಜನವಾಗಿದೆ. ದೇಶದ ಯಾವುದೇ ಭಾಗದಲ್ಲಿದ್ದರೂ ಇ- ಖಾತಾ ಮಾಡಿಸುವುದರಿಂದ, ನಿಮ್ಮ ಆಸ್ತಿ ದಾಖಲೆಗಳು ಫೋಟೋ ಸಮೇತ ನಿಮ್ಮ ಕೈಸೇರಿರುತ್ತದೆ. ಇದು ನಮ್ಮ ಗ್ಯಾರಂಟಿ. ಅಧಿಕಾರಿಗಳು ಮತ್ತು ಸ್ವಯಂಸೇವಕರು ನಿಮ್ಮ ಮನೆಬಾಗಿಲಿಗೆ ಬಂದು ಇ- ಖಾತಾ ಮಾಡಿಕೊಟ್ಟು, ನೆರವಾಗುತ್ತಾರೆ. ಜನಸಾಮಾನ್ಯರು ಇ- ಖಾತಾಗೆ ಸಂಬಂಧಿಸಿದ ಯಾವುದೇ ಸಂದೇಹಗಳಿದ್ದರೂ ಸಹಾಯವಾಣಿಗೆ ಕರೆ ಮಾಡಬಹುದು.
ಬೆಂಗಳೂರಿನ ಹೆಬ್ಬಾಗಿಲಾದ ಬ್ಯಾಟರಾಯನಪುರದಿಂದ ನಾವು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿಗೂ ಅಧಿಕ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಜುಲೈ 1ರಿಂದ ಒಂದು ತಿಂಗಳುಗಳ ಕಾಲ ಇ-ಖಾತಾ ಆಂದೋಲನ ನಡೆಯಲಿದ್ದು, ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲೂ ಇದೇ ರೀತಿಯ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು. 50X80 ಸೈಟ್ಗಳನ್ನು ಹೊಂದಿರುವವರಿಗೆ ನಂಬಿಕೆ ನಕ್ಷೆಯ ಮೂಲಕ ಕಟ್ಟಡ ನಕ್ಷೆಯನ್ನು ಮನೆ ಬಾಗಿಲಿಗೆ ಒದಗಿಸುವ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಇದನ್ನೂ ಆಂದೋಲನದ ರೀತಿಯಲ್ಲಿ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರಿಗೆ ತೆರಿಗೆ ಪಾವತಿಗಾಗಿ ಒನ್ ಟೈಮ್ ಸೆಟಲ್ಮೆಂಟ್ ಮಾಡುವ ಅವಕಾಶ ನೀಡಲಾಗಿದ್ದು,1200 ಕೋಟಿ ರೂ. ಸಂಗ್ರಹವಾಗಿದೆ. ಸುಪ್ರೀಂ ಕೋರ್ಟ್ ಆದೇಶನುಸಾರ ಕಟ್ಟಡ ನಕ್ಷೆ ಇಲ್ಲದೇ, ಪ್ರಮಾಣಪತ್ರವಿಲ್ಲದೇ ವಿದ್ಯುತ್, ನೀರಿನ ಸೌಲಭ್ಯಗಳನ್ನು ಕೊಡುವಂತಿಲ್ಲ. ಈ ಬಾರಿ ನಮ್ಮ ಜನರಿಗೆ ಸಹಾಯ ಮಾಡಲು ಅಧಿಕಾರಿಗಳ ಜೊತೆ ಚರ್ಚಿಸಿ, ಪರಿಹಾರ ಸೂಚಿಸುವಂತೆ ತಿಳಿಸಿದ್ದೇನೆ. ಅನಧಿಕೃತವಾಗಿ ಯಾವುದೇ ಕಾರಣಕ್ಕೂ ಕಟ್ಟಡವನ್ನು ಕಟ್ಟಬೇಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ಇ- ಖಾತಾ ಪಡೆದುಕೊಂಡು, ವಂಚನೆಯಿಂದ ತಪ್ಪಿಸಿಕೊಳ್ಳಿ. ನಿಮ್ಮ ಆಸ್ತಿ- ನಮ್ಮ ಗ್ಯಾರಂಟಿ. ನಿಮ್ಮ ಮನೆಬಾಗಿಲಿಗೆ ಬಂದು ನಮ್ಮ ಸರ್ಕಾರ ವಿಶೇಷವಾಗಿ ಸೇವೆ ಮಾಡುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.