ಬೆಂಗಳೂರು: ನೋಂದಣಿ ಕಾಯ್ದೆಯ ತಿದ್ದುಪಡಿಗೆ ಮೂಲಕ ಸೆಕ್ಷನ್ 9(ಅ) ಅಡಿಯಲ್ಲಿ ಡಿಜಿಟಲ್ ಸಹಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ನೊಂದಣಿ ಕರ್ನಾಟಕ ತಿದ್ದುಪಡಿ ವಿಧೇಯಕ 2025 ಸುಧಾರಣೆಯ ಅಂಶ ಒಳಗೊಂಡಿದೆ.
ಪ್ರಾಧಿಕಾರಗಳ ನಿವೇಶನ ಮಂಜೂರಾತಿಯಲ್ಲಿ ನೋಂದಣಿ ಅಧಿಕಾರಿ ಇಲ್ಲದೆಯೂ ಅದನ್ನು ಆಟೋಮ್ಯಾಟಿಕ್ ಆಗಿ ನೋಂದಣಿ ಮಾಡುವ ವ್ಯವಸ್ಥೆ ಜಾರಿ ಆಗಲಿದೆ. ಅದೇ ರೀತಿ 94 ಸಿ ಮತ್ತು 94 ಸಿಸಿ ಅಡಿ ಹಕ್ಕುಪತ್ರ ಹಾಗೂ ನಮೂನೆ 53 ಮತ್ತು 57ರ ಅಡಿ ಬಗರ್ ಹುಕುಂ ಜಮೀನು ತಹಶೀಲ್ದಾರ್ ಮಂಜೂರು ಮಾಡಿದ ಆಸ್ತಿಗಳ ನೋಂದಣಿಗೂ ಸಬ್ ರಿಜಿಸ್ಟ್ರಾರ್ ಅಗತ್ಯವಿಲ್ಲ. ತಹಶೀಲ್ದಾರ್ ಡಿಜಿಟಲ್ ಆಗಿ ಅಪ್ಲೋಡ್ ಮಾಡುತ್ತಿದ್ದಂತೆ ಆಟೋಮ್ಯಾಟಿಕ್ ಆಗಿ ಫಲಾನುಭವಿ ಹೆಸರಿಗೆ ನೋಂದಣಿ ಯಾಗುತ್ತದೆ.
ಈ ಸುಧಾರಣೆಯ ಜೊತೆಗೆ ಕಾಯ್ದೆ ತಿದ್ದುಪಡಿಯಿಂದ ರೈತರು ತಾವು ಬ್ಯಾಂಕ್ ಗಳಿಂದ ಪಡೆದ ಸಾಲ ತೀರಿಸಿದ್ದನ್ನು ಪಹಣಿ ಕಾಲಂನಿಂದ ತೆಗೆಸಲು ಕಂದಾಯ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಬ್ಯಾಂಕ್ ನವರು ಡಿಜಿಟಲ್ ಸಹಿಯೊಂದಿಗೆ ನೀಡಿರುವುದನ್ನು ಆಧರಿಸಿ ಕಂದಾಯ ದಾಖಲೆಗಳಲ್ಲಿ ಸ್ವಯಂಚಾಲಿತ ತಿದ್ದುಪಡಿಯಾಗುತ್ತದೆ. ಋಣಮುಕ್ತ ದಾಖಲೆ ಪಡೆದುಕೊಳ್ಳಲು ಮಧ್ಯವರ್ತಿಗಳನ್ನು ಅವಲಂಬಿಸುವ ಅಗತ್ಯ ಇರುವುದಿಲ್ಲ.
ನೊಂದಣಿ ಪ್ರಕ್ರಿಯೆಯಲ್ಲಿ ನಕಲಿ, ವಂಚನೆ ತಪ್ಪಿಸಲು ಪೇಪರ್ ಲೆಸ್ ಆಗಿ ಎಲ್ಲಾ ದಾಖಲೆಗಳು ಡಿಜಿಟಲ್ ಆಗಿಯೇ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಆರ್.ಟಿ.ಸಿ.ಯನ್ನು ಇಂಟಿಗ್ರೇಟ್ ಮಾಡಿ ಆಧಾರ್ ಸಂಖ್ಯೆ ಕಡ್ಡಾಯ ಮಾಡಲಾಗಿದ್ದು, ಇದಕ್ಕಾಗಿ ಕಾಯ್ದೆಯ ಸೆಕ್ಷನ್ 32 ರಲ್ಲಿ ತಿದ್ದುಪಡಿ ಮಾಡಲಾಗಿದೆ. ದಾಖಲೆಗಳು ಡಿಜಿಟಲ್ ಆಗಿ ಪರಿಶೀಲನೆಯಾಗುವಾಗ ರೈತರು ಖುದ್ದು ಸರ್ಕಾರಿ ಕಚೇರಿಗಳಿಗೆ ಬರುವ ಅಗತ್ಯವಿಲ್ಲ. ಆಟೋಮ್ಯಾಟಿಕ್ ಆಗಿ ರಿಜಿಸ್ಟರ್ ಆಗಲಿದೆ. 11 ಇ ಸ್ಕೆಚ್ ಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ಇದನ್ನು ಕೂಡ ತಿದ್ದುಪಡಿಯ ಮೂಲಕ ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.