ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಸದಸ್ಯರಿಗೆ ಶೀಘ್ರದಲ್ಲಿ ಶುಭ ಸುದ್ದಿ ಸಿಗಲಿದೆ. ಪಿಎಫ್ ಚಂದಾದಾರರು ಪ್ರತಿ 10 ವರ್ಷಕ್ಕೊಮ್ಮೆ ತಮ್ಮ ಖಾತೆಯಲ್ಲಿನ ಹಣವನ್ನು ಪೂರ್ಣವಾಗಿ ಇಲ್ಲವೇ ಅಂಶಿಕವಾಗಿ ಹಿಂಪಡೆದುಕೊಳ್ಳಲು ನಿಯಮಗಳನ್ನು ಸರಳಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸದಸ್ಯರು ತಮ್ಮ ಖಾತೆಯಿಂದ ಪ್ರತಿ 10 ವರ್ಷಕ್ಕೊಮ್ಮೆ ಹಣ ಹಿಂಪಡೆಯುವ ಪ್ರಸ್ತಾಪವನ್ನು ಇಪಿಎಫ್ ಮಂಡಿಸಿದ್ದು, ಇದನ್ನು ಕೇಂದ್ರ ಸರ್ಕಾರ ಪರಿಗಣಿಸುವ ಸಾಧ್ಯತೆ ಇದೆ.
ಹಣ ಹಿಂಪಡೆದುಕೊಳ್ಳಲು ಯಾವುದೇ ಕಾರಣ ನೀಡುವ ಅಗತ್ಯವಿಲ್ಲ. ಈಗ ಇಪಿಎಫ್ ನಲ್ಲಿ ಶೇಕಡ 8.25 ರಷ್ಟು ವಾರ್ಷಿಕ ಬಡ್ಡಿ ಇದೆ. ಇದಕ್ಕೆ ಬದಲಾಗಿ ಖಾತೆದಾರರು ಮ್ಯೂಚುಯಲ್ ಫಂಡ್ ಗಳಲ್ಲಿ ಇಲ್ಲವೇ ಷೇರುಗಳಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಲು ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಹಣ ಹಿಂಪಡೆಯುವ ಕಾಲಮಿತಿ ಕಡಿತ ಮಾಡಲಾಗಿದೆ ಎಂದು ಹೇಳಲಾಗಿದೆ.