ಬೆಂಗಳೂರು: ಪ್ರಯಾಣಿಕ ಸೇವೆ ಒದಗಿಸುವ ಸಲುವಾಗಿ ಭಾರತೀಯ ರೈಲ್ವೆ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಗೆ ಸಂಯೋಜಿಸುವ ರೈಲ್ ಒನ್ ಸಮಗ್ರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.
ದೈನಂದಿನ ಮತ್ತು ದೀರ್ಘ ಪ್ರಯಾಣ ಸರಳಗೊಳಿಸಲು ರೈಲ್ ಒನ್ ಅಪ್ಲಿಕೇಶನ್ ವಿನ್ಯಾಸಗೊಳಿಸಲಾಗಿದೆ. ಈ ಏಕೀಕೃತ ಅಪ್ಲಿಕೇಶನ್ ಅನ್ನು, ಐ.ಆರ್.ಸಿ.ಟಿ.ಸಿ. ರೈಲ್ ಕನೆಕ್ಟ್, ಯು.ಟಿ.ಎಸ್. ಆನ್ ಮೊಬೈಲ್, ಎನ್‌ಟಿಇಎಸ್, ರೈಲು ಸಹಾಯ ಮತ್ತು ಫುಡ್ ಟ್ರ್ಯಾಕ್ ನಂತಹ ಮೊಬೈಲ್ ಅಪ್ಲಿಕೇಶನ್ ಗಳ ವೈಶಿಷ್ಟ್ಯಗಳನ್ನು ಒಟ್ಟುಗೂಡಿಸಿ ಬಿಡುಗಡೆ ಮಾಡಲಾಗಿದೆ.
ಪ್ರಯಾಣಿಕರಿಗೆ ಟಿಕೆಟ್ ಗಳು, ರೈಲಿನ ಲೈವ್ ಟ್ರ್ಯಾಕಿಂಗ್, ಪಿ.ಎನ್.ಆರ್. ಪರಿಶೀಲನೆ, ಬೋಗಿಗಳ ವಿವರ, ದೂರುಗಳ ನೋಂದಣಿ, ಟಿಕೆಟ್ ಮರುಪಾವತಿ ಸೇರಿದಂತೆ ವಿವಿಧ ಸೇವೆಗಳು ಒಂದೇ ಆ್ಯಪ್ ನಲ್ಲಿ ದೊರೆಯಲಿವೆ.
ಐ.ಆರ್.ಸಿ.ಟಿ.ಸಿ. ಮತ್ತು ಯುಟಿಎಸ್ ನಲ್ಲಿ ಈಗಾಗಲೇ ನೋಂದಾಯಿಸಿಕೊಂಡಿರುವ ಬಳಕೆದಾರರ ಪ್ರತ್ಯೇಕ ನೋಂದಣಿ ಅಗತ್ಯವಿರುವುದಿಲ್ಲ. ನೇರವಾಗಿ ಲಾಗಿನ್ ಆಗಬಹುದಾಗಿದೆ.
ರೈಲ್ವೆಯ ಆಂತರಿಕ ಡಿಜಿಟಲ್ ಪಾವತಿ ವ್ಯವಸ್ಥೆ ಆರ್ ವ್ಯಾಲೆಟ್ ನೊಂದಿಗೆ ರೈಲ್ ಒನ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಿದ ಕಾಯ್ದಿರಿಸದ ಟಿಕೆಟ್ ಗಳ ಮೇಲೆ ಶೇಕಡ 3ರಷ್ಟು ರಿಯಾಯಿತಿ ಸಿಗಲಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.