ಬೆಂಗಳೂರು: ಇಂದಿನಿಂದ ಯೆಲ್ಲೋ ಲೈನ್ ನಲ್ಲಿ ಐದನೇ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ಆರ್.ವಿ. ರೋಡ್ ನಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ನಲ್ಲಿ ಬೆಳಗ್ಗೆ 5 ಗಂಟೆಗೆ ಸಂಚಾರ ಆರಂಭಿಸಿದೆ.
ಇಂದಿನಿಂದ ಯೆಲ್ಲೋ ಲೈನ್ ನಲ್ಲಿ ಪ್ರತಿ ದಿನ ಐದು ಮೆಟ್ರೋ ಸಂಚರಿಸುತ್ತವೆ. ಈ ಮಾರ್ಗದಲ್ಲಿ ಕೊನೆಯ ಮೆಟ್ರೋ ರಾತ್ರಿ 11 ಗಂಟೆಗೆ ಸಂಚರಿಸುತ್ತದೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿಯೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನವೆಂಬರ್ 1ರಿಂದ ಹಳದಿ ಮಾರ್ಗದಲ್ಲಿ ಐದನೇ ಮೆಟ್ರೋ ರೈಲು ಸೇವೆಗೆ ಚಾಲನೆ ನೀಡಿದೆ.
ನೂತನ ರೈಲಿನಿಂದಾಗಿ ಜನದಟ್ಟಣೆಯ ಅವಧಿಯಲ್ಲಿ 15 ನಿಮಿಷಕ್ಕೊಮ್ಮೆ ರೈಲುಗಳ ಸೇವೆ ಇರಲಿದೆ. ಈ ಹಿಂದೆ ನಾಲ್ಕು ರೈಲುಗಳು ಇದ್ದಾಗ 19 ನಿಮಿಷಕ್ಕೊಂದು ರೈಲು ಸಂಚಾರವಿತ್ತು. ಇದೀಗ 15 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ಈ ಬದಲಾವಣೆ ಎಲ್ಲಾ ದಿನಗಳಿಗೆ ಅನ್ವಯವಾಗಲಿದೆ.
ಆರ್.ವಿ. ರೋಡ್ ಮತ್ತು ಬೊಮ್ಮಸಂದ್ರದ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಹಾಗೂ ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮುಂದಿನ ಹಂತಗಳಲ್ಲಿ 2026ರ ಮಾರ್ಚ್ ಒಳಗೆ 15 ರೈಲು ಸೆಟ್ ಗಳನ್ನು ಸಂಚಾರಕ್ಕೆ ತರಲಾಗುವುದು. ರೈಲುಗಳ ಮಧ್ಯಂತರ ಐದರಿಂದ ಆರು ನಿಮಿಷಗಳಿಗೆ ಇಳಿಯುವ ನಿರೀಕ್ಷೆ ಇದೆ.
