ಬೆಂಗಳೂರು: ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ ಖಾತಾ ನೀಡುವ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ನಾಗರೀಕ ಸ್ನೇಹಿ ಆಡಳಿತ ಜನತೆಗೆ ತಲುಪಿಸುವ ಉದ್ದೇಶದಿಂದ ಬಿ-ಖಾತಾ ವಿತರಣೆ ಪ್ರಕ್ರಿಯೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಸುಮಾರು 10 ಲಕ್ಷ ಆಸ್ತಿಗಳಿಗೆ ಬಿ –ಖಾತಾ ಕೋರಿ ಅರ್ಜಿ ಸಲ್ಲಿಸಲಾಗಿದ್ದು, 2 ಲಕ್ಷ ಆಸ್ತಿಗಳಿಗೆ ಬಿ-ಖಾತಾ ವಿತರಿಸಲಾಗಿದೆ. ಉಳಿದವುಗಳ ಪರಿಶೀಲನೆ ಕಾರ್ಯ ನಡೆದಿದ್ದು, ಹಂತ ಹಂತವಾಗಿ ಬಿ-ಖಾತಾ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರವಾನಿಗೆ, ಭೂ ಪರಿವರ್ತನೆ, ಮಾಡಿಸಿಕೊಳ್ಳದೆ ನಕ್ಷೆ ಮಂಜೂರಾತಿ ಮಾಡಿಕೊಳ್ಳದೆ ಕಂದಾಯ ನಿವೇಶನಗಳಲ್ಲಿ ಕಟ್ಟಡದ ನಿರ್ಮಿಸಿಕೊಂಡವರ ಅನುಕೂಲಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬಿ –ಖಾತಾ ನೀಡಿ ಸಕ್ರಮಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದರ ಅನ್ವಯ ನಾಗರಿಕರಿಗೆ ಒಮ್ಮೆ ಅವಕಾಶ ನೀಡಲಾಗಿತ್ತು. ನಾಗರಿಕರು ನಿಗದಿತ ಶುಲ್ಕ ಪಾವತಿಸಿ ಕಟ್ಟಡಗಳಿಗೆ ಬಿ-ಖಾತಾ ಪಡೆದುಕೊಳ್ಳಬಹುದು. ರಾಜ್ಯದ ಮಹಾನಗರ ಪಾಲಿಕೆ ಮತ್ತು ನಗರ ಪ್ರದೇಶಗಳಲ್ಲಿ 30 ಲಕ್ಷಕ್ಕೂ ಅಧಿಕ ಅನಧಿಕೃತ ಕಟ್ಟಡಗಳು, ಮನೆಗಳು, ನಿವೇಶನಗಳಿವೆ ಎಂದು ಅಂದಾಜಿಸಲಾಗಿದೆ.