ನವದೆಹಲಿ: ಜಿ.ಎಸ್.ಟಿ. ದರ ಇಳಿಕೆ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ವಾಹನಗಳ ದರದಲ್ಲಿ ಭಾರೀ ಇಳಿಕೆ ಮಾಡಿವೆ.
ವಾಹನ ತಯಾರಿಕಾ ಕಂಪನಿಗಳಾದ ಹೀರೋ ಮೋಟೋ ಕಾರ್ಪ್, ರಾಯಲ್ ಎನ್ಫೀಲ್ಡ್, ಯಮಹಾ, ಫೋಕ್ಸ್ ವ್ಯಾಗನ್ ಮತ್ತು ಸ್ಕೋಡಾ ಕಂಪನಿಗಳು ವಾಹನಗಳ ಬೆಲೆ ಇಳಿಕೆ ಘೋಷಿಸಿದೆ. ಜಿ.ಎಸ್.ಟಿ. ದರ ಇಳಿಕೆಯ ಪರಿಣಾಮದಿಂದ ವಾಹನಗಳ ದರದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದ್ದು, ಸೆಪ್ಟಂಬರ್ 22 ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.
ಜಿ.ಎಸ್.ಟಿ. ಕಡಿತ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದು ನಮ್ಮ ಆದ್ಯತೆಯಾಗಿದೆ ಎಂದು ವಾಹನ ತಯಾರಿಕಾ ಕಂಪನಿಗಳು ಹೇಳಿವೆ. ರಾಯಲ್ ಎನ್ಫೀಲ್ಡ್ 350ಸಿಸಿ ಶ್ರೇಣಿಯ ದ್ವಿಚಕ್ರ ವಾಹನ ಬೆಲೆಯನ್ನು 22 ಸಾವಿರ ರೂ.ವರೆಗೆ ಇಳಿಸಿದೆ. ಹೀರೋ ಮೋಟಾರ್ ಕಾರ್ಪ್ ತನ್ನ ಆಯ್ದ ಮಾದರಿಯ ದ್ವಿಚಕ್ರ ವಾಹನಗಳ ದರವನ್ನು 15,743 ರೂ.ವರೆಗೂ ಕಡಿತಗೊಳಿಸಿದೆ.
ಯಮಹಾ ಮೋಟರ್ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು 17,581 ರೂಪಾಯಿವರೆಗೆ ಕಡಿಮೆ ಮಾಡಿದೆ. ಫೋಕ್ಸ್ ವ್ಯಾಗನ್ ಇಂಡಿಯಾ ಕಾರುಗಳ ಬೆಲೆಯನ್ನು 3.27 ಲಕ್ಷ ರೂ.ವರೆಗೆ ಕಡಿಮೆ ಮಾಡಲಾಗಿದೆ. ಸ್ಕೋಡಾ ಕಂಪನಿ ತನ್ನ ವಾಹನಗಳ ಬೆಲೆಯನ್ನು 3.3 ಲಕ್ಷ ರೂ.ವರೆಗೂ ಇಳಿಕೆ ಮಾಡಿದೆ.