ಬೆಂಗಳೂರು: ರಾಜ್ಯ ಸರ್ಕಾರದಿಂದ ಸಿನಿಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ನಿಗದಿಪಡಿಸಿ ಸೆಪ್ಟೆಂಬರ್ 12ರ ಶುಕ್ರವಾರದಿಂದಲೇ ಅನ್ವಯವಾಗುವಂತೆ ಅಧಿಸೂಚನೆ ಹೊರಡಿಸಲಾಗಿದೆ.
ಮಲ್ಟಿಪ್ಲೆಕ್ಸ್ ಗಳು ನಡೆಸುತ್ತಿದ್ದ ದುಬಾರಿ ಟಿಕೆಟ್ ದರ ಲೂಟಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ. ಏಕ ಪರದೆ ಮತ್ತು ಮಲ್ಟಿಪ್ಲೆಕ್ಸ್ ಟಿಕೆಟ್ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ ಎಂದು ಹೇಳಲಾಗಿದೆ.
ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಶೇ. 18ರಷ್ಟು ತೆರಿಗೆ ಸೇರಿ ಟಿಕೆಟ್ ದರ 236 ರೂ. ಆಗಲಿದೆ. ಸರ್ಕಾರ ಅಧಿಸೂಚನೆಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಿದ್ದು, 75 ಆಸನಗಳು ಅಥವಾ ಅದಕ್ಕಿಂತ ಕಡಿಮೆ ಆಸನಗಳ ಪ್ರೀಮಿಯಂ ಬಹುಪರದೆಯ ಚಿತ್ರಮಂದಿರಗಳನ್ನು ನಿಗದಿತ 200 ರೂ. ಗರಿಷ್ಠ ಟಿಕೆಟ್ ದರದ ಮಿತಿಯಿಂದ ಹೊರಗಿಡಲಾಗಿದೆ.

