ಬೆಂಗಳೂರು: ರಾಜ್ಯದಲ್ಲಿ ಡಿಎಲ್(ಚಾಲನಾ ಪರವಾನಿಗಿ), ಆರ್.ಸಿ.(ವಾಹನ ನೋಂದಣಿ ಪ್ರಮಾಣ ಪತ್ರ) ಸ್ಮಾರ್ಟ್ ಕಾರ್ಡ್ ವಿತರಣೆ ವಿಳಂಬ, ಅಕ್ರಮ ತಡೆಗೆ ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಸ್ಮಾರ್ಟ್ ಕಾರ್ಡ್ ಮುದ್ರಣ ಕೇಂದ್ರೀಕೃತವಾಗಲಿದ್ದು ಸ್ಪೀಡ್ ಪೋಸ್ಟ್ ಮೂಲಕ ಸೀದಾ ಮನೆಗೆ ಕಾರ್ಡ್ ಗಳನ್ನು ತಲುಪಿಸಲಾಗುವುದು.
ರಾಜ್ಯದಲ್ಲಿ 3 ಉಪ ಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗಳು, 44 RTO, 20 ARTO ಕಚೇರಿಗಳಿದ್ದು, ಈ ಕಚೇರಿಗಳ ಮೂಲಕ ಸಾರ್ವಜನಿಕರಿಗೆ ವೆಬ್ ಆಧಾರಿತ ಸಾರಥಿ -4, ವಾಹನ್-4 ತಂತ್ರಾಂಶದ ಮೂಲಕ ಡಿಎಲ್ ಮತ್ತು ಆರ್.ಸಿ. ನೀಡಲಾಗುತ್ತಿದೆ.
ಪ್ರಸ್ತುತ ಆಯಾ ಆರ್.ಟಿ.ಒ. ಕಚೇರಿಗಳಲ್ಲಿ ಡಿಎಲ್, ಆರ್.ಸಿ. ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಿಸಿ ಕೊಡಲಾಗುತ್ತಿದ್ದು, ಕಾಲಮಿತಿಯಲ್ಲಿ ಜನರ ಕೈ ಸೇರದೆ ವಿಳಂಬವಾಗುತ್ತಿದೆ. ಅಕ್ರಮದ ಬಗ್ಗೆಯೂ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಂತಿನಗರದ ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಲ್ಲಿಯೇ ಕೇಂದ್ರೀಕೃತ ಮುದ್ರಣ ವ್ಯವಸ್ಥೆ ಅಡಿಯಲ್ಲಿ ಸ್ಮಾರ್ಟ್ ಕಾರ್ಡ್ ಗಳನ್ನು ಸಿದ್ಧಪಡಿಸಿ ಸ್ಪೀಡ್ ಪೋಸ್ಟ್ ಮೂಲಕ ಜನರ ಮನೆ ಬಾಗಿಲಿಗೆ ಶೀಘ್ರವಾಗಿ ತಲುಪಿಸಲಾಗುವುದು.
ಹೊಸದಾಗಿ ನೀಡುವ ಸ್ಮಾರ್ಟ್ ಕಾರ್ಡ್ ಗಳು ಪಾಲಿಕಾರ್ಬೋನೇಟ್ ಆಗಿರುವುದರಿಂದ ಲೇಸರ್ ಮುದ್ರಣ ಹೊಂದಿರುವುದರಿಂದ ಬೇಗನೆ ಮುರಿಯುವುದಿಲ್ಲ ಮತ್ತು ಅಕ್ಷರಗಳು ಅಳಿಸಿ ಹೋಗುವುದಿಲ್ಲ ಎನ್ನಲಾಗಿದೆ.