ನವದೆಹಲಿ: ಜಿಎಸ್‌ಟಿ ಪರಿಷ್ಕರಣಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 22 ರಿಂದ ಜಿಎಸ್‌ಟಿ ದರ ಪರಿಷ್ಕರಣೆ ಜಾರಿಯಾಗಲಿದ್ದು, ಉತ್ಪನ್ನಗಳ ಬೆಲೆ ಇಳಿಕೆ ಪ್ರಮಾಣದ ಬಗ್ಗೆ ಚರ್ಚೆ ನಡೆದಿದೆ.
50 ಕೆಜಿ ಸಿಮೆಂಟ್ ಚೀಲದ ದರದಲ್ಲಿ 30 ರಿಂದ 35 ರೂ.ವರೆಗೂ ಇಳಿಕೆಯಾಗಬಹುದು ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆ ಅಂದಾಜಿಸಿದೆ. ಸಿಮೆಂಟ್ ಗೆ ಈ ಮೊದಲು ಶೇಕಡ 28 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವಂತೆ ಸಿಮೆಂಟ್ ಗೆ ಶೇಕಡ 18 ಜಿಎಸ್‌ಟಿ ವಿಧಿಸಲಾಗುವುದು. ಇದರಿಂದ ಸಹಜವಾಗಿಯೇ ಬೆಲೆ ಕಡಿಮೆಯಾಗಲಿದೆ.
ಸಿಮೆಂಟ್ ಬೇಡಿಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಸೆ. 22ರಿಂದ 50 ಕೆಜಿ ಸಿಮೆಂಟ್ ಚೀಲದ ದರ 30 ರಿಂದ 35 ರೂ.ವರೆಗೂ ಇಳಿಯಬಹುದು ಎನ್ನಲಾಗಿದೆ.
ಇನ್ನು ಕೃಷಿ, ಹೈನುಗಾರಿಕೆಗೆ ಸಂಬಂಧಿಸಿದ ಬಹುತೇಕ ಉತ್ಪನ್ನಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದ್ದು, ಗ್ರಾಮೀಣ ಆರ್ಥಿಕತೆಗೂ ಭಾರಿ ಉತ್ತೇಜನ ಸಿಗಲಿದೆ. ಜಿಎಸ್‌ಟಿ ಸರಳೀಕರಣದಿಂದ ಮುಂದಿನ ಹಣಕಾಸು ವರ್ಷದಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಲಿದ್ದು, ಗ್ರಾಹಕರ ಅನುಭೋಗ ಹೆಚ್ಚುತ್ತದೆ. ಗುಣಮಟ್ಟದ ಸರಕುಗಳ ಬೇಡಿಕೆ ಕೂಡ ಹೆಚ್ಚಾಗಲಿದೆ. ಮನೆ ಬಳಕೆಯ ಅಗತ್ಯ ವಸ್ತುಗಳು ಮತ್ತು ಸೇವೆಗಳ ಮೇಲಿನ ತೆರಿಗೆ ಭಾರ ಕಡಿಮೆಯಾಗಲಿದೆ.