ಬೆಂಗಳೂರು: ಬೆಂಗಳೂರು ರೋಟರಿ ಕ್ಲಬ್(RCB) ಶಾಲಾ ಶಿಕ್ಷಣ ಇಲಾಖೆಯೊಂದಿಗೆ ರಾಜ್ಯದ ಸರ್ಕಾರಿ ಶಾಲೆಗಳಿಗೆ ಮೇಜು-ಬೆಂಚುಗಳ ಜೊತೆಗೆ ಇಂಟರಾಕ್ಟಿವ್ ಎಲ್‌ಇಡಿ ಬೋರ್ಡ್‌ಗಳನ್ನು ಒದಗಿಸಲು ಇಂದು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪನವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು.
ರೋಟರಿ ಇಂಟರಾಕ್ಟಿವ್ ಲರ್ನಿಂಗ್ 2025-26 ಹೆಸರಿನ ಈ ಯೋಜನೆಯಡಿ, ರೋಟರಿ ಕ್ಲಬ್ ತನ್ನ ಟ್ರಸ್ಟ್ ಮುಖಾಂತರ ರಾಜ್ಯದ 100 ಸರ್ಕಾರಿ ಶಾಲಾ ತರಗತಿಗಳಿಗೆ ಬೆಂಚು-ಮೇಜುಗಳ ಜೊತೆಗೆ 75 ಇಂಚಿನ ಇಂಟರಾಕ್ಟಿವ್ ಬೋರ್ಡ್‌ಗಳನ್ನು ಯುಪಿಎಸ್ ಸೌಲಭ್ಯ ಸಹಿತ ಒದಗಿಸಲಿದೆ. ಸುಮಾರು ₹3.5 ಕೋಟಿ ವೆಚ್ಚದಲ್ಲಿ ಜಾರಿಗೊಳ್ಳುವ ಈ ಯೋಜನೆ 2026ರ ಜೂನ್ 30ರೊಳಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ. ಹೆಚ್ಚುವರಿ CSR ನೆರವು ದೊರೆತರೆ, 2026-27ರಲ್ಲಿ ಇನ್ನಷ್ಟು ತರಗತಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು.
ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಸುಖೇನ್ ಅವರು, ಕನಿಷ್ಠ 1,000 ಮೇಜು-ಬೆಂಚುಗಳು ಮತ್ತು ಸ್ಮಾರ್ಟ್ ಬೋರ್ಡ್‌ಗಳನ್ನು ಸರ್ಕಾರಿ ಶಾಲೆಗಳಲ್ಲಿ ಒದಗಿಸುವ ಉದ್ದೇಶವನ್ನು ಕ್ಲಬ್ ಹೊಂದಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಈ ಸಹಯೋಗವನ್ನು ಸ್ವಾಗತಿಸಿ, “ಸಾರ್ವಜನಿಕ ಶಿಕ್ಷಣ ಬಲಪಡಿಸಲು ಇದು ಮಹತ್ವದ ಹೆಜ್ಜೆ”ಎಂದರು. ಇಲಾಖೆಯ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮವು ಈಗಾಗಲೇ ಹಳೆಯ ವಿಧ್ಯಾರ್ಥಿಗಳು ಹಾಗೂ ಸಮುದಾಯದ ಬೆಂಬಲವನ್ನು ಪಡೆದುಕೊಂಡಿದೆ. ರೋಟರಿಯ ಈ ಪಾಲ್ಗೊಳ್ಳುವಿಕೆಯಿಂದ ಶಾಲೆಗಳ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಹೆಚ್ಚಿನ ಸಮುದಾಯ ಪಾಲ್ಗೊಳ್ಳುವಿಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕಿ ವಿದ್ಯಾ ಕುಮಾರಿ, ರೋಟರಿ ಜಿಲ್ಲಾ ಗವರ್ನರ್ ಎಲಿಜಬೆತ್ ಚೆರಿಯನ್ ಹಾಗೂ ಹಿರಿಯ ಅಧಿಕಾರಿಗಳು ಮತ್ತು ರೋಟರಿಯನ್ ಗಳು ಉಪಸ್ಥಿತರಿದ್ದರು.