ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ 2025- 26 ನೇ ಸಾಲಿನ ಸರ್ಕಾರಿ ವರ್ಗಾವಣೆಗೆ ನಿಗದಿ ಮಾಡಲಾಗಿದ್ದ ಕಾಲಾವಕಾಶವನ್ನು ಜೂನ್ 30ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.
ಈ ಮೊದಲು ಮೇ 12ರಿಂದ ಜೂನ್ 14ರವರೆಗೆ ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಕಾಲಾವಕಾಶ ನೀಡಿ ಆದೇಶಿಸಲಾಗಿತ್ತು. ಈ ವರ್ಗಾವಣೆ ಪ್ರಕ್ರಿಯೆಗೆ ಅವಧಿ ವಿಸ್ತರಿಸುವ ಅವಶ್ಯಕತೆ ಕಂಡು ಬಂದಿದ್ದರಿಂದ ಪರಿಗಣಿಸಲಾಗಿದೆ.
ಅಂತೆಯೇ ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಸಚಿವರಿಗೆ, ಗ್ರೂಪ್ ಸಿ ಮತ್ತು ಡಿ ವೃಂದದ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಜೂನ್ 30ರವರೆಗೆ ಕಾಲಾವಕಾಶ ವಿಸ್ತರಿಸಿ ಸರ್ಕಾರ ಅಧಿಕಾರ ನೀಡಿದೆ.