ಸರ್ಕಾರವು 2025-26 ನೇ ಸಾಲಿನಲ್ಲಿ ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಬಿಳಿ ಜೋಳ ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿ ನೇಮಕವಾಗಿದ್ದು, ಜಿಲ್ಲೆಯಲ್ಲಿ ಮೂರು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಬಿಳಿಜೋಳ(ಹೈಬ್ರಿಡ್) ರೂ.3699/- ಹಾಗೂ ಬಿಳಿಜೋಳ(ಮಾಲ್ದಂಡಿ) ರೂ.3749/- ರಂತೆ ದರ ನಿಗದಿಪಡಿಸಲಾಗಿದೆ. ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಮೂರೂ ಖರೀದಿ ಕೇಂದ್ರಗಳಿಗೆ ಖರೀದಿ ಅಧಿಕಾರಿಯನ್ನಾಗಿ ಕೊಪ್ಪಳ ಎಪಿಎಂಸಿ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆಯ ಮಳಿಗೆ ವ್ಯವಸ್ಥಾಪಕ ಮೃತ್ಯುಂಜಯ ಕೋನಾಪುರ ಅವರನ್ನು ನೇಮಕ ಮಾಡಲಾಗಿದೆ.
ಪ್ರತಿ ರೈತರಿಂದ ಹಿಡುವಳಿಯನ್ನು ಆಧಾರಿಸಿ ಪ್ರತಿ ಎಕರೆಗೆ 15 ಕ್ವಿಂ. ನಂತೆ ಗರಿಷ್ಟ 150 ಕ್ವಿಂ. ಬಿಳಿ ಜೋಳವನ್ನು ಖರೀದಿಸಲಾಗುವುದು. ರೈತರ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯನ್ನು ಬಯೋಮೆಟ್ರಿಕ್ ಆಧಾರದಲ್ಲಿ ಕೈಗೊಳ್ಳಲಿದ್ದು, ನವೆಂಬರ್ 15 ರಿಂದ 2026 ರ ಮಾರ್ಚ್ 30 ರವರೆಗೆ ರೈತರ ನೋಂದಣಿಯನ್ನು ನಡೆಸಲಾಗುವುದು. ಹಾಗೂ 2026 ರ ಜನವರಿ 1 ರಿಂದ ಮಾರ್ಚ್ 31 ರವರೆಗೆ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಫ್.ಎ.ಕ್ಯೂ ಮಾನದಂಡಗಳನ್ವಯ ಗುಣಮಟ್ಟದ ಬಿಳಿ ಜೋಳ ಖರೀದಿಸಲಾಗುವುದು. ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕುಷ್ಟಗಿ ಖರೀದಿ ಕೇಂದ್ರದ ಖರೀದಿ ಅಧಿಕಾರಿ ಮೊ.ಸಂ: 9035492273, ಯಲಬುರ್ಗಾದ ಖರೀದಿ ಕೇಂದ್ರದ ಖರೀದಿ ಅಧಿಕಾರಿ, ಮೊ.ಸಂ: 8494976809 ಹಾಗೂ ಕೊಪ್ಪಳ ಖರೀದಿ ಕೇಂದ್ರದ ಖರೀದಿ ಅಧಿಕಾರಿ ಮೊ.ಸಂ: 9901511930 ಇವರನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾದ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
