ರೈತರಿಗೆ ಗುಡ್ ನ್ಯೂಸ್ : ಸೆ. 1 ರಿಂದ ಪಹಣಿ ತಿದ್ದುಪಡಿಗೆ ವಿಶೇಷ ಅಭಿಯಾನ

ಸೆಪ್ಟಂಬರ್ 01 ರಿಂದ ಹದಿನೈದು ದಿನಗಳ ಕಾಲ ಪಹಣಿಯಲ್ಲಿನ ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿಕೊಡಲು ವಿಶೇಷ ಅಭಿಯಾನ ಆರಂಭಿಸಲಾಗುವುದು, ರೈತರು ಕೂಡಲೆ ತಮ್ಮ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ತಹಸಿಲ್ದಾರರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.

ಪಹಣಿ, ಆರ್‍ಟಿಸಿ ಯಲ್ಲಿನ ಲೋಪದೋಷಗಳ ತಿದ್ದುಪಡಿ ಅಧಿಕಾರವನ್ನು ಈ ಮೊದಲು ತಹಸಿಲ್ದಾರರಿಗೆ ನೀಡಲಾಗಿತ್ತು. ಆದರೆ ಇದೀಗ, ಈ ಅಧಿಕಾರವನ್ನು ಉಪವಿಭಾಗಾಧಿಕಾರಿಗಳಿಗೆ ವಹಿಸಲಾಗಿರುತ್ತದೆ. ಆರ್‍ಟಿಸಿ ಯಲ್ಲಿನ ಸಣ್ಣಪುಟ್ಟ ದೋಷಗಳಿಂದ ರೈತರಿಗೆ ಹಲವು ವಿಧದ ತೊಂದರೆಯಾಗುತ್ತಿದೆ, ಇದನ್ನು ಪರಿಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದಾಗಿ ರೈತ ಮುಖಂಡರುಗಳು ಜಿಲ್ಲಾಡಳಿತದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಇದೀಗ ರೈತರಿಗೆ ಅನುಕೂಲವಾಗುವಂತಾಗಲು ಸೆಪ್ಟಂಬರ್ 01 ರಿಂದ ಹದಿನೈದು ದಿನಗಳ ಕಾಲ ಜಿಲ್ಲೆಯಾದ್ಯಂತ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಪಹಣಿ ತಿದ್ದುಪಡಿ ಅಭಿಯಾನವನ್ನು ಕೈಗೊಳ್ಳಲಾಗುವುದು. ಪಹಣಿಯಲ್ಲಿನ ಸಣ್ಣ ಪುಟ್ಟ ದೋಷಗಳನ್ನು ತಿದ್ದುಪಡಿ ಮಾಡಲು (ಅಪೀಲು ಪ್ರಕರಣಗಳನ್ನು ಹೊರತುಪಡಿಸಿ) ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರೈತರು ತಮ್ಮ ಅರ್ಜಿಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಆಯಾ ತಹಸಿಲ್ದಾರರಿಗೆ ಸಲ್ಲಿಸಬೇಕು. ತಹಸಿಲ್ದಾರರು ಇಂತಹ ಅರ್ಜಿಗಳನ್ನು ತಮ್ಮ ಹಂತದಲ್ಲಿ ಪರಿಶೀಲಿಸಿ, ಅರ್ಹ ಅರ್ಜಿಗಳ ಪಟ್ಟಿ ಮಾಡಿಕೊಂಡು, ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದಲ್ಲಿ, ಉಪವಿಭಾಗಾಧಿಕಾರಿಗಳು, ಅರ್ಹ ಅರ್ಜಿಗಳಿಗೆ ಸಂಬಂಧಿಸಿದ ಆರ್‍ಟಿಸಿ ತಿದ್ದುಪಡಿಗೆ ಅನುಮೋದನೆ ನೀಡುವರು.

ರೈತರು ಈ ವಿಶೇಷ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read