ಹಾಸನ: ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಇಂದಿನಿಂದ ಪ್ರಾರಂಭವಾಗಿದ್ದು, ಈಗಾಗಲೇ ಬಿತ್ತನೆ ಬೀಜಕ್ಕೆ 1500-1600 ರೂ. ದರ ನಿಗದಿಪಡಿಸಲಾಗಿದೆ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ತಿಳಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಬಾರಿ ಒಳ್ಳೆಯ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರೈತರು ಉತ್ತಮ ಬೆಳೆ ಬೆಳೆದು ಅಭಿವೃದ್ಧಿ ಹೊಂದಲಿ ಹಾಗೂ ಮಾರಾಟಗಾರರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಬಿತ್ತನೆ ಬೀಜವನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಇಲಾಖೆ ಗಮನಕ್ಕೆ ತರುವಂತೆ ತಿಳಿಸಿದರು.
ರೈತರು ಬಿತ್ತನೆ ಬೀಜ ಖರೀದಿಸಿದ ನಂತರ ಬಿತ್ತನೆಗೆ ಮುನ್ನ ಅನುಸರಿಸಬೇಕಾದ ಕ್ರಮಗಳನ್ನು ಕುರಿತು ರೈತರಿಗೆ ಅರಿವು ಮೂಡಿಸಲು ಕ್ರಮ ವಹಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಮಂಗಳಾ, ತಹಸೀಲ್ದಾರ್ ಗೀತಾ, ಆಲೂಗಡ್ಡೆ ವರ್ತಕರಾದ ಗೋಪಾಲ್, ದೇವರಾಜ್, ಕೂಗಿಗೌಡ ಮತ್ತಿತರರು ಹಾಜರಿದ್ದರು.