GOOD NEWS : ರಾಜ್ಯ ಸರ್ಕಾರದಿಂದ ರೈತರ ಮಕ್ಕಳಿಗೆ ಗುಡ್ ನ್ಯೂಸ್ : ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿಗೆ 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಜಿಲ್ಲೆಯ ರೈತ ಮಕ್ಕಳ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2025ರ ಮೇ 02 ರಿಂದ 2025 ರ ಫೆ.28 ರ ವರೆಗೆ ಒಟ್ಟು 10 ತಿಂಗಳ ತರಬೇತಿಯನ್ನು ನೀಡಲಾಗುತ್ತದೆ.

ಅಭ್ಯರ್ಥಿಗಳ ಆಯ್ಕೆ ಗುರಿ

ಮಹಿಳೆಯರು 8, ಪುರುಷರು 16, ಪರಿಶಿಷ್ಟ ಜಾತಿ 03, ಪರಿಶಿಷ್ಟ ಪಂಗಡ 01 ಮತ್ತು ಇತರೆ 20 ಅಭ್ಯರ್ಥಿಗಳು ಸೇರಿ ಒಟ್ಟು 24 ಅಭ್ಯರ್ಥಿಗಳನ್ನು ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಆಯ್ಕೆ ಮಾಡುತ್ತಾರೆ.
ಅಭ್ಯರ್ಥಿಗಳ ವಯೋಮಿತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 18 ವರ್ಷದಿಂದ 33 ವರ್ಷದೊಳಗೆ ಇರಬೇಕು. ಇತರರಿಗೆ 18 ವರ್ಷದಿಂದ 30 ವರ್ಷದೊಳಗೆ ಹಾಗೂ ಮಾಜಿ ಸೈನಿಕರಿಗೆ 33 ರಿಂದ 65 ವರ್ಷದೊಳಗಿರಬೇಕು.

ಅಭ್ಯರ್ಥಿಗಳು ಕನಿಷ್ಠ ಕನ್ನಡ ವಿಷಯಗಳೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ತರಬೇತಿ ಹೊಂದಲು ಬಯಸುವ ಅಭ್ಯರ್ಥಿಯ ತಂದೆ-ತಾಯಿ, ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು.

ಅರ್ಜಿಗಳನ್ನು ಮಾ.01 ರಿಂದ 31 ರ ವರೆಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಬಳ್ಳಾರಿ, ಇವರ ಕಚೇರಿಯಲ್ಲಿ ಪಡೆಯಬಹುದು ಅಥವಾ ಇಲಾಖಾ ವೆಬ್ ಸೈಟ್ https://horticulturedir.karnataka.gov.in ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಭರ್ತಿಮಾಡಿದ ಅರ್ಜಿಗಳನ್ನು ಏಪ್ರೀಲ್ 01 ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು. ಏಪ್ರೀಲ್ 08 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.

*ವಿಶೇಷ ಸೂಚನೆ

ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಿತಿಯು ಸರ್ಕಾರದ ಮೀಸಲಾತಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಮೀಸಲಾತಿ ಮುಗಿದ ನಂತರ ಉಳಿಕೆ ಮೀಸಲಾತಿಗಳನ್ನು ಇತರೆ ಅಭ್ಯರ್ಥಿಗಳಿಗೆ ನೀಡಲಾಗುವುದು.

ಒಂದು ವೇಳೆ ಮೀಸಲಾದ ಸ್ಥಾನಗಳಿಗೆ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಮಹಿಳಾ ಮೀಸಲಾತಿ (ಶೇ.33)ಯನ್ನು ನಿಯಮಾನುಸಾರ ಪಾಲಿಸತಕ್ಕದ್ದು. ಮಹಿಳಾ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಸ್ಥಾನಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಮೀಸಲಾತಿ ಕುರಿತು ಸರ್ಕಾರದ ಮೀಸಲಾತಿಗಳನ್ವಯ ಆಯ್ಕೆ ಸಮಿತಿ ನಿರ್ಧರಿಸಲಾಗುತ್ತದೆ.
ಮಾಜಿ ಸೈನಿಕ ಅಭ್ಯರ್ಥಿಗಳು ಆಯ್ಕೆಗೊಂಡಲ್ಲಿ ಈಗಾಗಲೇ ಇಲಾಖೆಯಲ್ಲಿ ರೈತ ಮಕ್ಕಳಿಗೆ ಕಾಯ್ದಿರಿಸಿರುವ ಗುರಿಗಳಿಗೆ ಹೆಚ್ಚುವರಿಯಾಗಿ ಸೇರ್ಪಡಿಸಲಾಗುವುದು. ಅಭ್ಯರ್ಥಿಗಳಿಗೆ ಉಚಿತವಾಗಿ ಕಲಿಕೆಯ ಎಲ್ಲಾ ತರಹದ ಅವಕಾಶಗಳನ್ನು ಕಲ್ಪಿಸಲಾಗುವುದು. ಆದರೆ, ವಸತಿ ನಿಲಯದಲ್ಲಿ ವಾಸ್ತವ್ಯದ ವ್ಯವಸ್ಥೆಯು ಕಡ್ಡಾಯ ಇರುವುದಿಲ್ಲ ಹಾಗೂ ಶಿಷ್ಯವೇತನಕ್ಕೆ ಅವಕಾಶವಿರುವುದಿಲ್ಲ.

ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ಆಯ್ಕೆಯು ತೋಟಗಾರಿಕೆ ಪ್ರಾಯೋಗಿಕ ತರಬೇತಿಯಲ್ಲಿ ಹಮ್ಮಿಕೊಳ್ಳುವ ಚಟುವಟಿಕೆಗಳನ್ನು ಸ್ವಾವಲಂಬಿಯಾಗಿ ನಿರ್ವಹಿಸಲು ಶಕ್ತನಾಗಿರಬೇಕು ಹಾಗೂ ಚಟುವಟಿಕೆ ನಿರ್ವಹಿಸಲು ಸಾಧ್ಯವಾಗದಂತಹ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಇದಕ್ಕಾಗಿ ಪ್ರತ್ಯೇಕ ಸಂದರ್ಶನ ಪತ್ರ ಕಳುಹಿಸುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08392-278588 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read