ದೆಹಲಿ ಮತ್ತು ಗುರುಗ್ರಾಮ್ ನಡುವೆ ಪ್ರತಿನಿತ್ಯ ಪ್ರಯಾಣಿಸುವ ಲಕ್ಷಾಂತರ ಜನರಿಗೆ ಶೀಘ್ರದಲ್ಲೇ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ದೊರೆಯಲಿದೆ. ದ್ವಾರಕಾ ಎಕ್ಸ್‌ಪ್ರೆಸ್‌ವೇಯಿಂದ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ 3.6 ಕಿಲೋಮೀಟರ್ ಉದ್ದದ ಅತ್ಯಾಧುನಿಕ ಸುರಂಗವು ಮೇ ತಿಂಗಳ ಅಂತ್ಯದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಈ ಸುರಂಗವು ದೆಹಲಿ ಮತ್ತು ಗುರುಗ್ರಾಮ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-48 ರ ಮೇಲಿನ ವಾಹನ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ʼನ್ಯೂಸ್ 18ʼ ಹಿಂದಿ ವರದಿಯ ಪ್ರಕಾರ, ಈ ಸುರಂಗವನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಮಾನದಂಡಗಳ ಅಡಿಯಲ್ಲಿ ನಿರ್ಮಿಸಲಾಗಿದೆ. ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಸಿಸಿ ಟಿವಿ ಕಣ್ಗಾವಲು, ನೈಜ-ಸಮಯದ ಮೇಲ್ವಿಚಾರಣೆಗಾಗಿ ವಾರ್ ರೂಮ್ ಮತ್ತು ಆಧುನಿಕ ಭದ್ರತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ಇತ್ತೀಚೆಗೆ ದೌಲಾ ಕುವಾನ್‌ನಿಂದ ಮನೆಸರ್ ವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಸೇರಿದಂತೆ ಸಮಗ್ರ ಚಲನಶೀಲ ಯೋಜನೆಯ ಮೇಲೆ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದರು. ಕೇಂದ್ರ ರಾಜ್ಯ ಸಚಿವ ರಾವ್ ಇಂದರ್‌ಜಿತ್ ಸಿಂಗ್ ಅವರೊಂದಿಗಿನ ಸಭೆಯಲ್ಲಿ ಅವರು ದೆಹಲಿ, ಗುರುಗ್ರಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಂಪರ್ಕವನ್ನು ಸುಧಾರಿಸಲು ಉದ್ದೇಶಿಸಿರುವ ಹಲವಾರು ಮೂಲಸೌಕರ್ಯ ಯೋಜನೆಗಳ ಬಗ್ಗೆ ಸೂಚನೆ ನೀಡಿದರು. ಅಲ್ಲದೆ, ಹಲವಾರು ಮೇಲ್ಸೇತುವೆಗಳು ಮತ್ತು ಸುರಂಗ ಕಾರಿಡಾರ್‌ಗಳ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲಾಗುತ್ತಿದ್ದು, ಅಧಿಕಾರಿಗಳು ಮೂರು ತಿಂಗಳೊಳಗೆ ವಿಸ್ತೃತ ವರದಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ವಿಶೇಷ ಸುರಂಗವು ಕಾರ್ಯಾರಂಭ ಮಾಡಿದ ನಂತರ, ಗುರುಗ್ರಾಮ್, ವಸಂತ್ ಕುಂಜ್, ದ್ವಾರಕಾ ಮತ್ತು ಅಲಿಪುರದಂತಹ ಪ್ರಮುಖ ಪ್ರದೇಶಗಳ ನಡುವಿನ ಸಂಚಾರವು ಸುಲಭವಾಗಲಿದೆ ಮತ್ತು ಪ್ರಯಾಣಿಕರು ಟ್ರಾಫಿಕ್ ಕಿರಿಕಿರಿಯಿಂದ ನಿರಾಳರಾಗುತ್ತಾರೆ.
ದೆಹಲಿ-ದ್ವಾರಕಾ ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲಾಗಿರುವ ಈ 3.6 ಕಿಲೋಮೀಟರ್ ಉದ್ದದ ಸುರಂಗವು ಬರೋಬ್ಬರಿ 8 ಲೇನ್‌ಗಳನ್ನು ಹೊಂದಿದೆ. ವಿಶೇಷವೆಂದರೆ, ಇದು ಐಜಿಐ ವಿಮಾನ ನಿಲ್ದಾಣದ ಕೆಳಗೆ ನಿರ್ಮಿಸಲಾದ ಭಾರತದ ಅತಿ ಅಗಲವಾದ ಸುರಂಗವಾಗಿದ್ದು, ಅಲಿಪುರದಲ್ಲಿರುವ ಸಿಂಘು ಗಡಿಯವರೆಗೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಈ ಸುರಂಗದ ಮೂಲಕ ಪ್ರತಿ ನಿಮಿಷಕ್ಕೆ ನೂರಾರು ವಾಹನಗಳು ಹಾದುಹೋಗಬಹುದು ಮತ್ತು ಟ್ರಾಫಿಕ್ ಹರಿವಿನ ಆಧಾರದ ಮೇಲೆ ಗಂಟೆಗೆ 10,000 ಕ್ಕೂ ಹೆಚ್ಚು ವಾಹನಗಳು ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಸುರಂಗವು ಗುರುಗ್ರಾಮ್, ಫರಿದಾಬಾದ್ ಮತ್ತು ಮನೆಸರ್‌ನಿಂದ ಸೋನಿಪತ್, ಪಾಣಿಪತ್ ಮತ್ತು ಚಂಡೀಗಢದಂತಹ ಉತ್ತರ ಭಾಗದ ನಗರಗಳಿಗೆ ಸುಲಭವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಡುತ್ತದೆ. ಕೇಂದ್ರ ರಾಜ್ಯ ಸಚಿವ ರಾವ್ ಇಂದ್ರಜೀತ್ ಸಿಂಗ್, ಗುರುಗ್ರಾಮ್ ಮತ್ತು ದೆಹಲಿ ನಡುವಿನ ಪ್ರಸ್ತುತ ಟ್ರಾಫಿಕ್ ಪರಿಸ್ಥಿತಿಯ ಬಗ್ಗೆ ವಿವರವಾದ ವರದಿಯನ್ನು ತಯಾರಿಸಿ ಮೂರು ತಿಂಗಳೊಳಗೆ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ನಿರ್ದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.