ಬೆಂಗಳೂರು: ನಾಗರಿಕರಿಗೆ ಇ-ಖಾತಾ ಸೌಲಭ್ಯವನ್ನು ಶೀಘ್ರವಾಗಿ ನೀಡುವ ಸಲುವಾಗಿ ಆನ್ಲೈನ್ ನಲ್ಲಿ ಫೇಸ್ ಲೆಸ್ ವ್ಯವಸ್ಥೆಯನ್ನು ಸುಧಾರಿತ ಮಟ್ಟದಲ್ಲಿ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ.
ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ಇಂತಹ ವಿಶಿಷ್ಟ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ನಾಗರಿಕರು ಮತ್ತು ಅಧಿಕಾರಿಗಳ ನಡುವಿನ ನೇರ ಸಂಪರ್ಕ ಕಡಿಮೆ ಮಾಡಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಮೊದಲು ಬಂದವರಿಗೆ ಆದ್ಯತೆ ಎನ್ನುವ ನೀತಿಯಂತೆ ನಾಗರಿಕರು ಅರ್ಜಿ ಸಲ್ಲಿಸಿದ ದಿನ ಆಧರಿಸಿ ಅನುಷ್ಠಾನ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಲು ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಪ್ರತಿ ಅಧಿಕಾರಿಗೆ ಲಾಗಿನ್ ನಲ್ಲಿ ಅರ್ಜಿ ತಲುಪಿದ ಕ್ರಮವನ್ನು ಆಧರಿಸಿ ಫೇಸ್ ಲೆಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಮಧ್ಯವರ್ತಿಗಳನ್ನು ನಿಯಂತ್ರಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಸಾರ್ವಜನಿಕರು ಇ-ಖಾತಾ ಸೌಲಭ್ಯ ಪಡೆಯಲು ಆನ್ಲೈನ್ ಅಥವಾ ಫೇಸ್ ಲೆಸ್ ವ್ಯವಸ್ಥೆ ಬಳಸಿಕೊಳ್ಳಬಹುದಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.