ಹಾಸನ: ಜಿಲ್ಲೆಯಲ್ಲಿರುವ ಆಟೋ ಚಾಲಕರಿಗೆ ಚಾಲನಾ ಪರವಾನಗಿ, ನವೀಕರಣ, ಫಿಟ್ ನೆಸ್ ಸರ್ಟಿಫೆಕೇಟ್, ಪರ್ಮಿಟ್, ಆಟೋ ವರ್ಗಾವಣೆ ಈ ಸೌಲಭ್ಯಗಳಿಗಾಗಿ ಪ್ರತ್ಯೇಕ ಸೇವಾ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಆಟೋ ಚಾಲಕರ ಕುಂದು ಕೊರತೆ ಸಭೆ ನಡೆಸಿ ಮಾತನಾಡಿದ ಅವರು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಟೋ ನಿಲ್ದಾಣಕ್ಕೆ ನಿಗದಿತ ಸ್ಥಳಗಳನ್ನು ಗುರುತಿಸುವಂತೆ ಸೂಚಿಸಿದರು.
ಆಟೋ ಚಾಲಕರಿಗೆ ಎಬಿಆರ್ಕೆ ಕಾರ್ಡ್, ಇ-ಶ್ರಮ್ ಕಾರ್ಡ್, ಪಿಎಂಜೆಜೆಎಂ, ಎಪಿವೈ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಟೋ ಚಾಲಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸಬೇಕು. ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಎಚ್ಚರವಹಿಸಬೇಕು ಎಂದ ಅವರು ಅವರ ಕುಟುಂಬದ ಭವಿಷ್ಯ ಉತ್ತಮವಾಗಬೇಕು ಎಂದರು.
ನಗರವ್ಯಾಪ್ತಿಯಲ್ಲಿ ವಾಹನಗಳನ್ನು ಕ್ರಮಬದ್ಧವಾಗಿ ನಿಲುಗಡೆ ಮಾಡದೆ ಅಡ್ಡದಿಡ್ಡಿಯಾಗಿ ನಿಲ್ಲಿಸುತ್ತಾರೆ, ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಶಿಸ್ತು ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ತಮ್ಮಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಗಿರೀಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.