ಬೆಂಗಳೂರು: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಇನ್ನು 10 ಕೆಜಿ ಬದಲಿಗೆ ಐದು ಕೆಜಿ ಅಕ್ಕಿ ವಿತರಿಸಲಾಗುವುದು. ಇದರೊಂದಿಗೆ ತೊಗರಿ ಬೇಳೆ, ಹೆಸರು ಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಬಿಪಿಎಲ್ ಮತ್ತು ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯರಿಗೆ ನೀಡುತ್ತಿದ್ದ ತಲಾ ಹತ್ತು ಕೆಜಿ ಅಕ್ಕಿ ಬದಲಿಗೆ ತಲಾ ಐದು ಕೆಜಿ ಅಕ್ಕಿ ಹಾಗೂ ತೊಗರಿ ಬೇಳೆ, ಹೆಸರುಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಒಳಗೊಂಡ ಇಂದಿರಾ ಆಹಾರ ಕಿಟ್ ವಿತರಿಸಲು ಸಂಪುಟ ಸಭೆ ತೀರ್ಮಾನಿಸಿದೆ.
ಇಂದಿರಾ ಆಹಾರ ಕಿಟ್ ತಲಾ ಒಂದು ಕೆಜಿ ತೊಗರಿಬೇಳೆ, ಹೆಸರು ಕಾಳು, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಸಕ್ಕರೆ, ಉಪ್ಪು ಹೊಂದಿರುತ್ತದೆ. ಈ ಆಹಾರ ಕಿಟ್ ಹಂಚಿಕೆಯನ್ನು ಪಡಿತರ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಒಬ್ಬರು ಅಥವಾ ಇಬ್ಬರು ಸದಸ್ಯರು ಮಾತ್ರ ಇರುವ ಕುಟುಂಬಕ್ಕೆ ತಲಾ ಅರ್ಧ ಕೆಜಿಯಂತೆ 2.5 ಕೆಜಿಯ ಕಿಟ್ ವಿತರಿಸಲಾಗುವುದು. ಮೂರು ಅಥವಾ ನಾಲ್ಕು ಮಂದಿ ಸದಸ್ಯರು ಇರುವ ಕುಟುಂಬಕ್ಕೆ ತಲಾ ಒಂದು ಕೆಜಿಯಂತೆ 5 ಕೆಜಿ ತೂಕದ ಕಿಟ್ ಕೊಡಲಾಗುವುದು. ಐದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ತಲಾ 1.5 ಕೆಜಿಯಂತೆ 7.5 ಕೆಜಿ ಆಹಾರ ಕಿಟ್ ನೀಡಲಾಗುವುದು ಎನ್ನಲಾಗಿದೆ.