ಬೆಂಗಳೂರು : UGC ವೇತನ ಶ್ರೇಣಿಯ ಬೋಧಕ, ಭೋದಕೇತರ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಎಂಬಂತೆ ತುಟ್ಟಿಭತ್ಯೆ ಶೇ. 58 ಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ .ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು, ಸರ್ಕಾರಿ/ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಪೂರ್ಣಕಾಲಿಕ ನೌಕರರಿಗೆ ಈ ಆದೇಶಗಳು ಅನ್ವಯಿಸುತ್ತವೆ.
- 2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿನ ಬೋಧಕ ಮತ್ತು ತತ್ಸಮಾನ ವೃಂದದ ಸಿಬ್ಬಂದಿಗಳ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 55 ರಿಂದ ಶೇಕಡ 58ಕ್ಕೆ 1ನೇ ಜುಲೈ 2025 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ.
- ಈ ಆದೇಶದ ಉದ್ದೇಶಗಳಿಗಾಗಿ ‘ಮೂಲ ವೇತನ’ ಎಂದರೆ ಸರ್ಕಾರಿ ನೌಕರನು ಧಾರಣೆ ಮಾಡಿರುವ ಹುದ್ದೆಗೆ ಅನ್ವಯವಾಗುವ 2016ರ ಪರಿಷ್ಕೃತ ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಪಡೆಯುತ್ತಿರುವ ಮೂಲ ವೇತನ.
- ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು, ಸರ್ಕಾರಿ/ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಪೂರ್ಣಕಾಲಿಕ ನೌಕರರಿಗೆ ಈ ಆದೇಶಗಳು ಅನ್ವಯಿಸುತ್ತವೆ.
- ವೇತನ ಎಂದು ಪರಿಗಣಿಸಲ್ಪಡದ ಯಾವುದೇ ಉಪಲಬ್ದಗಳನ್ನು ಮೂಲ ವೇತನಕ್ಕೆ ಸೇರಿಸತಕ್ಕದ್ದಲ್ಲ.
- ಈ ಆದೇಶದ ಮೇರೆಗೆ ಮಂಜೂರಾಗಿರುವ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡುವುದು.
- ಯುಜಿಸಿ/ಐಸಿಎಆರ್/ಎಐಸಿಟಿಇ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೆ ಈ ಆದೇಶಗಳು ಅನ್ವಯಿಸುವುದಿಲ್ಲ.
- ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು 2025ರ ಅಕ್ಟೋಬರ್ ಮಾಹೆಯ ವೇತನ ಬಟವಾಡೆಗೂ ಮೊದಲು ಪಾವತಿ ಮಾಡತಕ್ಕದ್ದಲ್ಲ.
- ತುಟ್ಟಿಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು.
- ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.



