ಬೆಂಗಳೂರು : ಕೇಂದ್ರವು ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಗೋವಾ ಸಿಎಂ ಹೇಳಿಕೆ ಆಘಾತಕಾರಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಹದಾಯಿ ಕೇವಲ ನದಿಯಲ್ಲ, ಅವಳು ನಮ್ಮ ಮಹಾತಾಯಿ.ಕೇಂದ್ರವು ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಹೇಳಿಕೆ ನಿಜಕ್ಕೂ ಆಘಾತಕಾರಿ. 2018ರಲ್ಲಿ ಮಹದಾಯಿ ಜಲವಿವಾದ ನ್ಯಾಯಮಂಡಳಿ 13.42 ಟಿಎಂಸಿ ನೀರನ್ನು ನಮ್ಮ ರಾಜ್ಯಕ್ಕೆ ನಿಗದಿಪಡಿಸಿ ಐತೀರ್ಪು ನೀಡಿದ್ದರೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದರು.
ಮಹದಾಯಿ ಯೋಜನೆಯು ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆಯ ಸುಮಾರು 40 ಲಕ್ಷಕ್ಕೂ ಹೆಚ್ಚು ಜನರಿಗೆ ನೀರು ಒದಗಿಸಲಿದೆ. ಉತ್ತರ ಕರ್ನಾಟಕದ ಜನರ ಮತ್ತು ರೈತರ ಹಿತಾಸಕ್ತಿ ಪರಿಗಣಿಸಿ, ಕೇಂದ್ರ ಸರ್ಕಾರವು ತಕ್ಷಣವೇ ಈ ಯೋಜನೆಗೆ ಅನುಮೋದನೆ ನೀಡಬೇಕು. ನಾನು ಇತ್ತೀಚೆಗೆ ದೆಹಲಿಗೆ ತೆರಳಿದ ಸಂದರ್ಭದಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ತಕ್ಷಣವೇ ಮಹದಾಯಿ ಯೋಜನೆಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದೇನೆ.ಮಹದಾಯಿಗಾಗಿ ನಮ್ಮದು ನ್ಯಾಯಯುತವಾದ ಹೋರಾಟ. ನಮ್ಮ ಪಾಲಿನ ನೀರು ಸಿಗುವವರೆಗೂ ಈ ಹೋರಾಟ ನಿರಂತರ.
ನಮ್ಮ ನೀರು. ನಮ್ಮ ಹಕ್ಕು ಎಂದು ಅವರು ಹೇಳಿದ್ದಾರೆ.