ನವದೆಹಲಿ: ಪ್ರಮುಖ ಹಬ್ಬವಾದ ದೀಪಾವಳಿಗೆ ಜಾಗತಿಕ ಮಾನ್ಯತೆ ದೊರೆತಿದೆ. ಯುನೆಸ್ಕೊ ತನ್ನ ಅಮೂರ್ತ ಸಾಂಸ್ಕೃತಿಕ ಪರಂಪರೆಗಳ ಪಟ್ಟಿಗೆ ದೀಪಾವಳಿ ಸೇರ್ಪಡೆ ಮಾಡಿದೆ.
2025 ರ ಪಟ್ಟಿಯನ್ನು ಯುನೆಸ್ಕೊ ಬುಧವಾರ ಬಿಡುಗಡೆ ಮಾಡಿದೆ. ದೀಪಾವಳಿಯ ಜೊತೆಗೆ ಜಗತ್ತಿನ 19 ಇತರೆ ಸಾಂಸ್ಕೃತಿಕ ಪರಂಪರೆಗಳು ಕೂಡ ಪಟ್ಟಿಯಲ್ಲಿ ಸ್ನಾನ ಪಡೆದುಕೊಂಡಿವೆ. ಸ್ಮಾರಕಗಳು ಮಾತ್ರವಲ್ಲದೆ ಹಬ್ಬಗಳು, ಸಾಂಸ್ಕೃತಿಕ ಆಚರಣೆಗಳು, ನೃತ್ಯ, ಸಂಗೀತ, ಕರಕುಶಲ ಜ್ಞಾನವನ್ನು ಯುನೆಸ್ಕೊ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಅವುಗಳಿಗೆ ಮಾನ್ಯತೆ ನೀಡಿದೆ.
ದೀಪಾವಳಿಗೆ ಪಟ್ಟಿಯಲ್ಲಿ ಸ್ಥಾನ ನೀಡುವ ಮೂಲಕ ಹಬ್ಬದ ಸಾಂಸ್ಕೃತಿಕ ಮೌಲ್ಯವನ್ನು ರಕ್ಷಿಸಲು ಜಾಗತಿಕ ಅರಿವು ಉತ್ತೇಜಿಸಲು ಭವಿಷ್ಯದ ತಲೆಮಾರಿಗೂ ಸಂಪ್ರದಾಯ ಕೊಂಡೊಯ್ಯಲು ಉದ್ದೇಶಿಸಲಾಗಿದೆ ಎಂದು ಯುನೆಸ್ಕೊ ತಿಳಿಸಿದೆ.
ದೆಹಲಿಯ ಕೆಂಪು ಕೋಟೆ ಆವರಣದಲ್ಲಿ ನಡೆದ ಯುನೆಸ್ಕೊ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕೊಲ್ಕತ್ತಾದ ದುರ್ಗಾ ಪೂಜಾ, ಕುಂಭಮೇಳ, ಕೇರಳದ ಮುಡಿಯೇಟ್ಟು, ಗುಜರಾತ್ ನ ಗಾರ್ಭ ನೃತ್ಯ, ಯೋಗ, ರಾಮಲೀಲಾ ಸೇರಿದಂತೆ ದೇಶದ ಹಲವು ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳು ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾಗಿವೆ.
ದೀಪಾವಳಿ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ 16ನೇ ಸಾಂಸ್ಕೃತಿಕ ಪರಂಪರೆಯಾಗಿದೆ. ಪ್ರಧಾನಿ ಮೋದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯುನೆಸ್ಕೊ ಮಾನ್ಯತೆಯಿಂದ ದೀಪಾವಳಿಯ ಜಾಗತಿಕ ಜನಪ್ರಿಯತೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
