ಥಾಣೆ: ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ನಾಲ್ಕು ವರ್ಷದ ಬಾಲಕಿ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದು, ಸಂಬಂಧಿಕರೇ ಬಾಲಕಿಗೆ ಚಿತ್ರಹಿಂಸೆ ನೀಡಿ ಕೊಲೆಗೈರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ರಾಯಗಢ ಪೊಲೀಸರು ಒಂದು ವರ್ಷದ ಬಳಿಕ ಕೊಲೆ ರಹಸ್ಯ ಭೇದಿಸಿದ್ದಾರೆ. ಮೃತ ಬಾಲಕಿಯ ತಲೆಬುರುಡೆ ಪತ್ತೆಯಾಗಿದ್ದು, ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಾಲಕಿ ತಂದೆ ರಾಹುಲ್ ಘಡ್ಜೆ ಕಳೆದ ವರ್ಷ ಜೈಲು ಸೇರಿದ್ದರು. ಆ ಬಳಿಕ ಬಾಲಕಿಯನ್ನು ಪೋಷಣೆ ಮಾಡಲು ಯಾರೂ ಇಲ್ಲದ ಪರಿಸ್ಥಿತಿ. ಬಾಲಕಿಯನ್ನು ಚಿಂಚವಾಲಿ ಗ್ರಾಮದ ಆಕೆಯ ಚಿಕ್ಕಮ್ಮ ಅಪರ್ಣಾ ಅನಿಲ್ ಮಕ್ವಾನಾ ಹಾಗೂ ಆಕೆಯ ಪತಿ ಪ್ರಥಮೇಶ್ ಕಂಬ್ರಿ ನೋಡಿಕೊಳ್ಳುತ್ತಿದ್ದರು. ಬಾಲಕಿಯನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದೇವೆ ಎಂದು ಬಾಯಲ್ಲಿ ಹೇಳುತ್ತಿದ್ದ ದಂಪತಿ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂಬುದು ಈಗ ಬಯಲಾಗಿದೆ. ಆದರೆ ಬಾಲಕಿ ಈಗಾಗಲೇ ಸಾವನ್ನಪ್ಪಿದ್ದಾಳೆ.
ಬಾಲಕಿಯನ್ನು ಆಕೆಯ ಚಿಕ್ಕಪ್ಪ ಮನಬಂದಂತೆ ಥಳಿಸಿದ್ದ. ಚಿಕ್ಕಪ್ಪನ ಏಟಿಗೆ ಬಾಲಕಿ ಸಾವನ್ನಪ್ಪಿದ್ದಳು. ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾರೆ ಕಿರಾತಕರು. ಬಾಲಕಿ ಸಂಬಂಧಿ ಜ್ಯೋತಿ ಎಂಬುವವರು ಅಪರಣಾ ದಂಪತಿ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಿಟ್ಟಿನಲ್ಲಿ ಪೊಲೀಸರು ಅಪರ್ಣಾ ದಂಪತಿಯ ಚಿಂಚವಾಲಿ ಮನೆಗೆ ಹೋಗಿ ವಿಚಾರಿಸಿದಾಗ ಬಾಲಕಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ದಂಪತಿಗಳಿಬ್ಬರನ್ನೂ ಬಂಧಿಸಿರುವ ಪೊಲೀಸರು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.