ಚಿತ್ರದುರ್ಗ: ಪೋಷಕರು ತನ್ನ ಮದುವೆಗೆ ಸಿದ್ಧತೆ ನಡೆಸುತ್ತಿರುವುದನ್ನು ವಿರೋಧಿಸಿ ಬಾಲಕಿಯೊಬ್ಬಳು ಮೊಳಕಾಲ್ಮೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಶಾಲೆ ಬಿಟ್ಟು ಮನೆಯಲ್ಲಿರುವ ಬಾಲಕಿ ಪೊಲೀಸ್ ಠಾಣೆಗೆ ತೆರಳಿ ತನ್ನ ತಂದೆ, ತಾಯಿ ಹಾಗೂ ಸಹೋದರ ನನಗೆ ಮದುವೆ ಮಾಡಲು ಮುಂದಾಗಿದ್ದಾರೆ. ಈಗಲೇ ಮದುವೆಯಾಗಲು ನನಗೆ ಇಷ್ಟವಿಲ್ಲ. ಆದರೂ ಪತ್ನಿ ಕಳೆದುಕೊಂಡ ವ್ಯಕ್ತಿಯೊಬ್ಬನಿಗೆ ಎರಡನೇ ಮದುವೆ ಮಾಡಲು ನಿಶ್ಚಯ ಮಾಡಿದ್ದಾರೆ. ಮದುವೆಯಾಗಲು ಬಲವಂತಪಡಿಸುತ್ತಿದ್ದಾರೆ ಎಂದು ಬಾಲಕಿ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆಗೆ ದೂರು ನೀಡಿದ್ದಾಳೆ.
ಎಂಟನೇ ತರಗತಿ ಓದುವಾಗ ಪೊಲೀಸರು ಶಾಲೆಗೆ ಆಗಮಿಸಿ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿದ್ದರು. ಅದು ನೆನಪಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುವುದಾಗಿ ಬಾಲಕಿ ತಿಳಿಸಿದ್ದು, ಪೋಷಕರನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದಾಗ ಒಪ್ಪಿಕೊಂಡಿದ್ದಾರೆ. ಬಾಲ್ಯ ವಿವಾಹ ಮಾಡದಂತೆ ಪೋಷಕರಿಗೆ ತಿಳಿಸಿ ಬಾಲಕಿಯನ್ನು ಚಿತ್ರದುರ್ಗದ ಬಾಲ ಮಂದಿರಕ್ಕೆ ಬಿಡಲಾಗಿದೆ.