ಜಾರ್ಜ್ ಫರ್ನಾಂಡೀಸ್ ಸೋದರನ ಉಗುರು ಕಿತ್ತರು, ರಸ್ತೆಯಲ್ಲಿ ಹೋಗುತ್ತಿದ್ದವರ ಸಂತಾನಹರಣ ಮಾಡಿದ್ರು: ತುರ್ತು ಪರಿಸ್ಥಿತಿ ಕರಾಳ ದಿನಾಚರಣೆಯಲ್ಲಿ ಪ್ರಹ್ಲಾದ್ ಜೋಶಿ ಹೇಳಿಕೆ

ಧಾರವಾಡ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಹಳಷ್ಟು ಚಿತ್ರ ಹಿಂಸೆ ಕೊಟ್ಟರು. ಜಾರ್ಜ್ ಫರ್ನಾಂಡಿಸ್ ಅವರ ಸಹೋದರನಿಗೆ ಚಿತ್ರ ಹಿಂಸೆ ಕೊಟ್ಟರು. ಅವರ ಬೆರಳಿನ ಉಗುರು ಕಿತ್ತು ಹಾಕಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಹಿನ್ನೆಲೆ ಧಾರವಾಡದ ಪುಟ್ಟಪ್ಪ ಸಭಾಭವನದಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಇವರು ಕೇಳಿದ ಹಾಡು ಹೇಳದಿದ್ದಕ್ಕೆ ಕಿಶೋರ್ ಕುಮಾರ್ ಗೆ ಬ್ಯಾನ್ ಮಾಡಿದ್ದರು. ಕಿಶೋರ್ ಕುಮಾರ್ ಹಾಡು ಕೂಡ ರೇಡಿಯೋದಲ್ಲಿ ಬರಲಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲಾಲು ಪ್ರಸಾದ್ ಜೈಲು ಸೇರಿದ್ದರು. ಆದರೆ ಲಾಲು ಪ್ರಸಾದ್ ಯಾದವ್ ಈಗ ಕಾಂಗ್ರೆಸ್ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದರು. ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕರೆತಂದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದರು. 1.7 ಕೋಟಿ ಜನರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಚಿಕಿತ್ಸೆ ಬಳಿಕ ಇದರಲ್ಲಿ ಎಷ್ಟೋ ಜನ ಸತ್ತೇ ಹೋದರು. ಮದುವೆಯಾಗದವರಿಗೂ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿದರು. ಅವರಲ್ಲಿ ಕೆಲವರು ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ಜೋಶಿ ಹೇಳಿದ್ದಾರೆ.

ನ್ಯಾಯಮೂರ್ತಿ ಖನ್ನಾ ಬರೆದಿದ್ದ ಜಡ್ಜ್ ಮೆಂಟ್ ಅನ್ನು ಇಂದಿರಾಗಾಂಧಿ ಕಿತ್ತು ಹಾಕಿದ್ದರು. ಇದು ಸಂವಿಧಾನ ಹತ್ಯಾ ದಿನ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ನಾವು ಸಂವಿಧಾನವನ್ನು ತಿದ್ದುಪಡಿ ಮಾಡಿದ್ದೇವೆ. ಕಾಶ್ಮೀರದ 370ನೇ ವಿಧಿ ತೆಗೆದು ಹಾಕಿದ್ದೇವೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದ್ದೇವೆ. ಮೋದಿ ಅಂತಹವರು 10 ಜನ ಬಂದರೂ 370 ತೆಗೆಯಲು ಆಗಲ್ಲ ಅಂದ್ರು. ಎರಡನೇ ಬಾರಿ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತೆಗೆದು ಹಾಕಿದರು ಎಂದು ಹೇಳಿದ್ದಾರೆ.

ಜಾತ್ಯತೀತತೆ ನಮ್ಮ ದೇಶದ ಜನರ ರಕ್ತದಲ್ಲಿಯೇ ಇದೆ. ಆದರೆ ಕೆಲವರು ಅಂಬೇಡ್ಕರ್ ಸಂವಿಧಾನ ಬದಲಿಸುತ್ತಿದ್ದಾರೆ. ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಜಾರಿಗೆ ತಂದರು. ಆ ಮೂಲಕ ದೇಶದ ಸಂವಿಧಾನವನ್ನೇ ಬದಲಾಯಿಸಿದರು. ಅದರ ನೆನಪು ಮಾಡಿ ಕೊಡುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಚುನಾವಣೆಯ ಕುರಿತು ಅನೇಕರು ಮಾತನಾಡುತ್ತಾರೆ. ಆದರೆ ರಾಜ್ಯಸಭಾ ಸದಸ್ಯರನ್ನ ನ್ಯಾಯಾಧೀಶರನ್ನಾಗಿ ಮಾಡಿದರು. ಬಳಿಕ ನ್ಯಾಯಾಧೀಶರನ್ನೇ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರು. ತಮಗೆ ಬೇಕಾದಾಗ ವಾಯುಸೇನೆ ಹೆಲಿಕಾಪ್ಟರ್ ಬಳಕೆ ಮಾಡಿದರು. ನ್ಯಾಯಮೂರ್ತಿ ಖನ್ನಾ ಇಂದಿರಾಗಾಂಧಿ ಆಯ್ಕೆಯನ್ನು ಅನೂರ್ಜಿತಗೊಳಿಸಿದ್ದರು. ಆರು ವರ್ಷ ಚುನಾವಣೆಗೆ ನಿಲ್ಲದಂತೆ ಅನೂರ್ಜಿತಗೊಳಿಸಿದ್ದರು. ಆದರೆ ಇಂದಿರಾ ಗಾಂಧಿಯವರಿಗೆ ಸರ್ವಾಧಿಕಾರ ಬೇಕಿತ್ತು. ಅದಕ್ಕಾಗಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದರು. 39ನೇ ಆರ್ಟಿಕಲ್ ಗೆ ಇಂದಿರಾಗಾಂಧಿ ತಿದ್ದುಪಡಿ ಮಾಡಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸ್ಪೀಕರ್ ಸೇರಿ ಪ್ರಧಾನಿಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎನ್ನುವ ತಿದ್ದುಪಡಿ ಮಾಡಿದರು. ಬಳಿಕ ತುರ್ತು ಪರಿಸ್ಥಿತಿ ಹೇರಲಾಯಿತು ಎಂದು ಜೋಶಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read