ಬೆಂಗಳೂರು : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯನ್ನು ಸೆ.15 ರಿಂದ ನವೆಂಬರ್ 21 ರವರೆಗೆ ಬೆಳಿಗ್ಗೆ 9.00 ರಿಂದ ಸಂಜೆ 6.00 ಗಂಟೆಯವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ. ಜಿ ಅವರು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 12 ಆಸ್ಪತ್ರೆಗಳಾದ ಬಿಜಿಎಸ್ ಮೆಡಿಕಲ್ ಕಾಲೇಜು ಅಂಡ್ ಹಾಸ್ಪಿಟಲ್ ಕೆಂಗೇರಿ, ಬೌರಿಂಗ್ ಅಂಡ್ ಲೇಡಿ ಕರ್ಜನ್ ಮೆಡಿಕಲ್ ಕಾಲೇಜ್ ಶಿವಾಜಿನಗರ, ಇ ಎಸ್ ಐ ಸಿ ಹಾಸ್ಪಿಟಲ್ ಪೀಣ್ಯ ಯಶವಂತಪುರ, ವಿಕ್ಟೋರಿಯಾ ಹಾಸ್ಪಿಟಲ್, ಯಲಹಂಕ ತಾಲೂಕು ಹಾಸ್ಪಿಟಲ್, ಬೆಂಗಳೂರು ಉತ್ತರ, ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಅಂಡ್ ಹಾಸ್ಪಿಟಲ್ ಕೆಂಗೇರಿ, ಕೆಆರ್ ಪುರಂ ತಾಲೂಕು ಹಾಸ್ಪಿಟಲ್, ಬೆಂಗಳೂರು ಪೂರ್ವ, ಜಯನಗರ ಜೆನರಲ್ ಹಾಸ್ಪಿಟಲ್ ಜಯನಗರ, ಇ ಎಸ್ ಐ ಸಿ ಮಾಡ್ರನ್ ಹಾಸ್ಪಿಟಲ್ ರಾಜಾಜಿನಗರ, ರಾಮಯ್ಯ ಹಾಸ್ಪಿಟಲ್ ಎಂ ಎಸ್ ರಾಮಯ್ಯ ನಗರ್, ಕೆ ಸಿ ಜನರಲ್ ಹಾಸ್ಪಿಟಲ್ ಮಲ್ಲೇಶ್ವರಂ, ಸರ್ ಸಿ ವಿ ರಾಮನ್ ಜನರಲ್ ಹಾಸ್ಪಿಟಲ್ ಇಂದಿರಾನಗರ ಇಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಿದರು.
ಸಮೀಕ್ಷೆಗೆ ಒಳವಡಲು ಇಚ್ಛಿಸುವ ಲಿಂಗತ್ವ ಅಲ್ಪ ಸಂಖ್ಯಾತರು ಆಸ್ಪತ್ರೆಗಳಿಗೆ ತೆರಳಿ ತಮ್ಮ ವಿವರವನ್ನು ನೊಂದಾಯಿಸಬಹುದಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂ.1800-599-2025 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವರದರಾಜ ಬಿ, ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ರವೀಂದ್ರನಾಥ್ ಎಂ. ಮೇಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಸುಮಂಗಲ ಅವರು ಸೇರಿದಂತೆ ತಾಲ್ಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.