ಬೆಂಗಳೂರು: ಖಾಲಿ ಜಾಗಗಳಲ್ಲಿ, ರಸ್ತೆಬದಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಬುದ್ಧಿ ಕಲಿಸಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿಗಳು ಕಸ ಸುರಿದವರ ಮನೆ ಮುಂದೆಯೇ ವಾಹನಗಟ್ಟಲೇ ಕಸ ಸುರಿದು ದಂಡ ವಿಧಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೊಸಕೆರೆಹಳ್ಳಿಯ ದತ್ತಾತ್ರೇಯ ಟೆಂಪಲ್ ರಸ್ತೆ, ಬನಶಂಕರಿ ಎರಡನೇ ಹಂತಗಳಲ್ಲಿ ಸ್ಥಳೀಯ ನಿವಾಸಿಗಳು ಕಸದ ವಾಹನಗಳಿಗೆ ತ್ಯಾಜ್ಯ ನೀಡದೇ ರಸ್ತೆ ಬದಿ ಕಸವನ್ನು ಎಸೆಯುತ್ತಿದ್ದರು. ಇದನ್ನು ಗಮನಿಸಿದ ಬಿಎಸ್ ಡಬ್ಲ್ಯೂ ಎಂಎಲ್ ಸಿಬ್ಬಂದಿ ನಿವಾಸಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ದೂರು ನೀಡುತ್ತಿದ್ದಂತೆ ಕಸದ ವಾಹನದ ಸಮೇತ ಸ್ಥಳಕ್ಕಾಗಮಿಸಿದ ಜಿಬಿಎ ಅಧಿಕಾರಿಗಳು, ಸಿಬ್ಬಂದಿಗಳು ರಸ್ತೆಬದಿ ಎಸೆದಿದ್ದ ಕಸಗಳನ್ನೆಲ್ಲ ಎತ್ತಿಕೊಂಡು ಹೋಗಿ ಕಸ ಸುರಿದವರ ಮನೆ ಮುಂದೆಯೇ ಸುರಿದು ಬುದ್ಧಿ ಕಲಿಸಿದ್ದಾರೆ. ಅಲ್ಲದೇ ಮನೆಯವರಿಗೆ 100 ರೂಪಾಯಿ ದಂಡ ವಿಧಿಸಿದ್ದಾರೆ.
ಕಸದ ವಾಹನಗಳು ಪ್ರತಿ ದಿನ ಮನೆ ಬಳಿ ಬಂದು ವಿಸಿಲ್ ಹಾಕಿ ಕಾಯುತ್ತಾರೆ. ಮುಂಜಾನೆ 8 ಗಂಟೆಯೊಳಗೆ ಕಸದ ವಾಹನಗಳು ಬಂದರೂ ನಿವಾಸಿಗಳು ಕಸ ನೀಡದೇ ಮನೆ ಬಳಿ, ರಸ್ತೆ ಬಳಿ ಕಸ ಎಸೆದು ಹೋಗುತ್ತಿದ್ದಾರೆ. ಇಂತಹ ಜನರಿಗೆ ತಕ್ಕ ಪಾಠಕಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ಹಾಗಾಗಿ ಜಿಬಿಎ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಎಲ್ಲೆಲ್ಲಿ ಯಾರು ಕಸ ಸುರಿಯುತ್ತಾರೋ ಅಂತವರ ಮನೆ ಮುಂದೆ ಕಸ ಸುರಿದು, ದಂಡ ವಿಧಿಸುತ್ತೇವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
