ಗದಗ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಇಂದು ಲಕ್ಷ್ಮೇಶ್ವರ ಬಂದ್ ಗೆ ಕರೆ ನೀಡಲಾಗಿದ್ದು ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶ ಹೊರಡಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಪರ ಹೋರಾಟಗಾರರು ಗುರುವಾರ ಲಕ್ಷ್ಮೇಶ್ವರ ಬಂದ್ ಗೆ ಕರೆ ನೀಡಿದ್ದಾರೆ.
ಕಳೆದ ಐದು ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಲಕ್ಷ್ಮೇಶ್ವರ ಬಂದ್ ಗೆ ಕರೆ ನೀಡಲಾಗಿದೆ.
ಹೋರಾಟಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು, ಸಂಘ-ಸಂಸ್ಥೆಗಳು ಬೆಂಬಲ ನೀಡಿವೆ. ರೈತರ ಬೇಡಿಕೆಗಳ ಬಗ್ಗೆ ಸಿಎಂ ಜೊತೆ ಮಾತನಾಡಿ ಖರೀದಿ ಕೇಂದ್ರ ಆರಂಭಿಸಲಾಗುವುದು. ಕನಿಷ್ಠ ಒಂದು ವಾರ ಕಾಲಾವಕಾಶ ನೀಡಬೇಕೆಂದು ಸಚಿವ ಹೆಚ್.ಕೆ. ಪಾಟೀಲ್ ರೈತ ಮುಖಂಡರಿಗೆ ಮನವಿ ಮಾಡಿದ್ದಾರೆ.
