ದೇಶದಲ್ಲಿ ಮನೆಗಳಿಗೆ ಫುಲ್‌ ಡಿಮ್ಯಾಂಡ್‌; 10 ವರ್ಷಗಳಲ್ಲೇ ದಾಖಲೆಯ ಏರಿಕೆ…..!

 

ಭಾರತದಲ್ಲಿ ರಿಯಲ್ ಎಸ್ಟೇಟ್‌ಗೆ ಬೇಡಿಕೆ ಹೆಚ್ಚಿದೆ. ದೇಶದ ರಿಯಲ್ ಎಸ್ಟೇಟ್ ಮಾರುಕಟ್ಟೆ ಹೊಸ ಉತ್ತುಂಗಕ್ಕೇರಿದೆ. ನಿರಂತರ ಬೇಡಿಕೆಯಿಂದಾಗಿ ವಸತಿ ಮಾರಾಟವು 11 ವರ್ಷಗಳ ಗರಿಷ್ಠ ಅಂದರೆ 1.73 ಲಕ್ಷ ಯುನಿಟ್‌ಗಳನ್ನು ತಲುಪಿದೆ.

ವಸತಿ ಮಾರಾಟವು ಜನವರಿಯಿಂದ ಜೂನ್‌ವರೆಗೆ ಶೇ.11 ರಷ್ಟು ಹೆಚ್ಚಾಗಿದೆ ಮತ್ತು 10 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಅವಧಿಯಲ್ಲಿ ದೇಶದ ಎಂಟು ಪ್ರಮುಖ ನಗರಗಳಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯು ದಾಖಲೆ ಮುಟ್ಟಿದೆ. ಈ ವೇಳೆ 3.47 ಕೋಟಿ ಚದರ ಅಡಿಗಳಷ್ಟು ಬೇಡಿಕೆಯಿತ್ತು.

ತಜ್ಞರ ಪ್ರಕಾರ ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಬಲವಾದ ಆರ್ಥಿಕ ಮೂಲಭೂತ ಮತ್ತು ಸ್ಥಿರವಾದ ಸಾಮಾಜಿಕ-ರಾಜಕೀಯ ಪರಿಸ್ಥಿತಿಗಳಿಂದಾಗಿ ವೇಗವಾಗಿ ಬೆಳೆದಿದೆ. ಇದರ ಫಲವಾಗಿ ವಸತಿ ಮತ್ತು ಕಚೇರಿ ಸ್ಥಳಾವಕಾಶದ ಬೇಡಿಕೆ ದಶಕದಲ್ಲೇ ಅತ್ಯಧಿಕವಾಗಿದೆ.

2024ರ ಮೊದಲಾರ್ಧದಲ್ಲಿ (ಜನವರಿ-ಜೂನ್‌) ಒಟ್ಟು ಮಾರಾಟದಲ್ಲಿ ಪ್ರೀಮಿಯಂ ವಸತಿಗಳ ಪಾಲು ಶೇ.34 ರಷ್ಟಿದೆ. ಮುಂಬೈನಲ್ಲಿ ವಸತಿ ಮಾರಾಟವು ಜನವರಿಯಿಂದ ಜೂನ್‌ವರೆಗೆ 47,259 ಯುನಿಟ್‌ಗಳಿಗೆ ಏರಿಕೆಯಾಗಿದೆ. ಇದು 16 ಪ್ರತಿಶತದಷ್ಟು ಏರಿಕೆಯಾಗಿದೆ. ಆದರೆ ನಗರದಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯು 79 ಪ್ರತಿಶತದಷ್ಟು ಹೆಚ್ಚಿ 58 ಲಕ್ಷ ಚದರ ಅಡಿಗಳಿಗೆ ತಲುಪಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ವಸತಿ ಮಾರಾಟವು 28,998 ಯುನಿಟ್‌ಗಳಷ್ಟಿತ್ತು, ಆದರೆ ಇಲ್ಲಿ ಬೇಡಿಕೆ ಕುಸಿತವಾಗಿದೆ. ಆದರೆ ಕಚೇರಿ ಸ್ಥಳಾವಕಾಶದ ಬೇಡಿಕೆಯು ಶೇ.11.5ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲೂ ವಸತಿ ಮಾರಾಟದಲ್ಲಿ ಶೇ.4ರಷ್ಟು ಏರಿಕೆಯಾಗಿದ್ದು, 27,404 ಯುನಿಟ್‌ಗಳಿಗೆ ತಲುಪಿದೆ. ಕಚೇರಿಗೆ ಡಿಮ್ಯಾಂಡ್‌ ಶೇ.21 ರಷ್ಟು ಏರಿಕೆಯಾಗಿ 84 ಲಕ್ಷ ಚದರ ಅಡಿಗಳಿಗೆ ತಲುಪಿದೆ.

ಪುಣೆಯಲ್ಲಿ ಕೂಡ ವಸತಿ ಮಾರಾಟವು 13 ಪ್ರತಿಶತದಷ್ಟು ಏರಿತ್ತು. ಕಚೇರಿ ಸ್ಥಳಾವಕಾಶದ ಬೇಡಿಕೆಯಲ್ಲೂ ಏರಿಕೆಯಾಗಿದೆ. ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆಯು ದಾಖಲೆಯ ಮಟ್ಟದಲ್ಲಿ ಹೆಚ್ಚಳವಾಗಿದೆ. ಹೆಚ್ಚಿನ ಆರ್ಥಿಕ ಬೆಳವಣಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯೇ ಈ ಮಟ್ಟದ ಹೆಚ್ಚಳಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಖರೀದಿದಾರರಲ್ಲಿ ಮನೆಗಳನ್ನು ಕೊಂಡುಕೊಳ್ಳುವ ಬಯಕೆ ಮತ್ತು ಸ್ಥಿರವಾದ ಸಾಲದ ದರಗಳು ಈ ಬೆಳವಣಿಗೆಯನ್ನು ಉತ್ತೇಜಿಸುತ್ತಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read