ಬೆಂಗಳೂರು: ವಂಚನೆ ಪ್ರಕರಣದ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ಮಹಿಳೆಯೊಬ್ಬರ ಪರ ಬಂದು ತಾನು ವಕೀಲ ಎಂದು ಹೇಳಿಕೊಂಡು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಾಟಕವಾಡುತ್ತಿದ್ದ ಪ್ರೊಫೆಸರ್ ಓರ್ವನನ್ನು ಬೆಂಗಳೂರಿನ ಬಸವೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ಯೋಗಾನಂದ್ ಬಂಧಿತ ಆರೋಪಿ. ಪ್ರಭಾವಿ ರಾಜಕಾರಣಿಗಳ ಆಪ್ತೆ ಎಂದು ಹೇಳಿಕೊಂಡು ನಂಬಿಸಿ ವಂಚಿಸುತ್ತಿದ್ದ ಪ್ರಕರಣದ ಆರೋಪಿ ಸವಿತಾಳನ್ನು ವಿಚಾರಣೆಗೆ ಕರೆದೊಯ್ದಿದ್ದಾಗ ಆಕೆಯ ಪರ ವಕೀಲ ಎಂದು ಪೊಲೀಸ್ ಠಾಣೆಗೆ ಬಂದು ಗಲಾಟೆ ಮಾಡಿದ್ದ. ಯಾವ ಆಧಾರದ ಮೇಲೆ ಆಕೆಯನ್ನು ಬಂಧಿಸಿದ್ದೀರಿ? ಎಂದು ಪ್ರಶ್ನಿಸಿದ್ದ. ತಾನು ಆಕೆ ಪರ ವಕೀಲ ಎಂದು ಹೇಳಿ ಪೊಲೀಸರ ವಶದಲ್ಲಿದ್ದ ಸವಿತಾಳ ಬಳಿ ಇದ್ದ ಆಕೆಯ ಮನೆ ಬೀಗವನ್ನು ತೆಗೆದುಕೊಳ್ಳಲು ಯತ್ನಿಸಿದ್ದ.
ಬೀಗ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ತಡೆದಾಗ ಪೊಲೀಸ್ ಸಿಬ್ಬಂದಿಯನ್ನೇ ಯೋಗಾನಂದ್ ಹೆದರಿಸಿದ್ದ. ಈ ವೇಳೆ ಸ್ಥಳದಲ್ಲಿದ್ದ ಕೆ.ಪಿ.ಅಗ್ರಹಾರ ಠಾಣೆಯ ಇನ್ ಪೆಕ್ಟರ್ ಗೋವಿಂದರಾಜ್, ಈ ಹಿಂದೆ ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆತ ತಾನು ವಕೀಲನಲ್ಲ, ಪ್ರೊಫೆಸ್ ಎಂದು ಬಾಯ್ಬಿಟ್ಟಿದ್ದಾನೆ. ಸದ್ಯ ಯೋಗಾನಂದ್ ನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.