ಕುಂದಾಪುರ : ಕೊಲ್ಲೂರು ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಓಪನ್ ಮಾಡಿ ವಂಚನೆ ಎಸಗಿರುವ ಘಟನೆ ನಡೆದಿದ್ದು, ದೂರು ದಾಖಲಾಗಿದೆ.
ಹೌದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೊಠಡಿ ಕಾಯ್ದಿರಿಸಲು ನಕಲಿ ವೆಬ್ ಸೈಟ್ ತಯಾರಿಸಿ ವಂಚನೆ ಮಾಡಿರುವ ಘಟನೆ ನಡೆದಿದ್ದು, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೇವಸ್ಥಾನದ ಅಧಿಕೃತ ವೆಬ್ ಸೈಟ್ http://karnatakatemplesaccommodation.com ಬದಲಿಗೆ karnatakatempleaccommodation ಎಂಬ ಹೆಸರಿನ ಅನಧಿಕೃತ ನಕಲಿ ವೆಬ್ಸೈಟ್ನ್ನು ರಚಿಸಿದ್ದು, ಈ ನಕಲಿ ವೆಬ್ಸೈಟ್ ಮೂಲಕ ಹಲವಾರು ಜನರಿಗೆ ವಂಚನೆ ಎಸಗಲಾಗಿದೆ.
ನಕಲಿ ವೆಬ್ಸೈಟ್ ಮೂಲಕ ಭಕ್ತರಿಗೆ ಲಲಿತಾಂಬಿಕಾ ಅತಿಥಿಗೃಹದ ಕೊಠಡಿಯನ್ನು ಕಾಯ್ದಿರಿಸಿ, ವಾಟ್ಸ್ಆ್ಯಪ್ ಮೂಲಕ ಪೋನ್ ಪೇ ಕ್ಯೂ ಆರ್ ಕೋಡ್ ಅನ್ನು ನೀಡಿ ಹಣ ಪಡೆದು, ನಕಲಿ ರಶೀದಿ ನೀಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
