ರಾಮನಗರ(ಬೆಂಗಳೂರು ದಕ್ಷಿಣ): ಸಹಜೀವನದಲ್ಲಿದ್ದ ಹಿಂದೂ, ಮುಸ್ಲಿಂ ಜೋಡಿಯ ತಲೆ ಬೋಳಿಸಿದ ಐವರನ್ನು ಬಂಧಿಸಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಹಿಂದೂ ಸಮುದಾಯದ ಪುರುಷ ಮತ್ತು ಮುಸ್ಲಿಂ ಸಮುದಾಯದ ಮಹಿಳೆ ಪರಸ್ಪರ ಸಹಜೀವನ ನಡೆಸುತ್ತಿರುವುದನ್ನು ವಿರೋಧಿಸಿದ ಮುಸ್ಲಿಂ ಯುವಕರ ಗುಂಪು ಇಬ್ಬರ ಮೇಲೆ ಹಲ್ಲೆ ಮಾಡಿ ತಲೆ ಬೋಳಿಸಿ ಸಾರ್ವಜನಿಕವಾಗಿ ಅಪಮಾನಿಸಿದ ಘಟನೆ ಕನಕಪುರದ ಇಂದಿರಾ ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕನಕಪುರದ ಇಂದಿರಾ ನಗರದ ನಿವಾಸಿ ಹಿಂದೂ ಧರ್ಮದವರಾಗಿದ್ದು, ಮಹಿಳೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಆತನ ಪತ್ನಿ ಸಾವನ್ನಪ್ಪಿದ್ದು, ಮಹಿಳೆ ಪತಿಯಿಂದ ದೂರವಾಗಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಜೊತೆಯಲ್ಲಿ ಸುತ್ತಾಡುವುದನ್ನು ಸಹಿಸದ ಮುಸ್ಲಿಂ ಸಮುದಾಯದ ಯುವಕರು ಕೃತ್ಯ ಎಸಗಿದ್ದಾರೆ. ಮಹಿಳೆಯ ಮನೆಯವರು ಕೆಲ ಯುವಕರೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಇಬ್ಬರ ತಲೆ ಬೋಳಿಸಿದ್ದಾರೆ. ವ್ಯಕ್ತಿ ಮತ್ತು ಮಹಿಳೆಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶೇಕ್ ಕಬೀರ್, ಸುಹೇಲ್, ಸೈಯದ್, ನವಾಜ್ ಖಾನ್ ಸೇರಿ ಐವರನ್ನು ಬಂಧಿಸಿದ್ದಾರೆ.