ಕ್ಷೇತ್ರ ಕಾರ್ಯ ಮುಗಿಸಿ ಕಚೇರಿಗೆ ಮರಳುತ್ತಿದ್ದ 31 ವರ್ಷದ ಬಿಪಿನ್, ಕೆರೆಯ ಬಳಿ ಗದ್ದಲ ಕೇಳಿ ದ್ವಿಚಕ್ರ ವಾಹನ ನಿಲ್ಲಿಸಿ ತಕ್ಷಣ ಧಾವಿಸಿದರು. ಯಾರೋ ಮುಳುಗುತ್ತಿರುವುದನ್ನು ಅರಿತ ಅವರು, ತಮ್ಮ ಬಟ್ಟೆಗಳನ್ನು ತೆಗೆದು, ಕೈಯಲ್ಲಿದ್ದ ಕಡತವನ್ನು ಬೈಕ್ ಮೇಲೆ ಇಟ್ಟು ನೇರವಾಗಿ ಕೆರೆಗೆ ಹಾರಿದ್ದಾರೆ.
ಮುಳುಗುತ್ತಿದ್ದ ವ್ಯಕ್ತಿಯನ್ನು ತಲುಪಿದ ಅವರು, ಆತನ ಕೂದಲನ್ನು ಹಿಡಿದು ಸುರಕ್ಷಿತವಾಗಿ ದಡಕ್ಕೆ ಎಳೆದರು. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಪಾಲಾರಿವಟ್ಟಂನ ಥಮ್ಮನಂ ನಿವಾಸಿ ಕೆ.ಎಚ್. ಅನೀಶ್ ಕುಮಾರ್ (36) ಎಂದು ಗುರುತಿಸಲಾಗಿದೆ. ಬಿಪಿನ್, ಅನೀಶ್ ರನ್ನು ದಡಕ್ಕೆ ತಲುಪಿಸುವಷ್ಟರಲ್ಲಿ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಅನೀಶ್ ಅವರು ನೀರನ್ನು ವಾಂತಿ ಮಾಡಿದ ನಂತರ ಪ್ರಜ್ಞೆ ಮರಳಿ ಪಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ವೈಕಂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಘಟನೆ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ಅನೀಶ್, ತಮ್ಮ ದೊಡ್ಡಪ್ಪನ ಮಗನ ಗೃಹ ಪ್ರವೇಶ ಸಮಾರಂಭಕ್ಕೆ ಉದಯನಪುರಂಗೆ ಬಂದಿದ್ದರು. ನಂತರ, ಅವರು ಎರ್ನಾಕುಲಂನ ಇಬ್ಬರು ಸಂಬಂಧಿಕರೊಂದಿಗೆ ಕೆರೆಯಲ್ಲಿ ಈಜಲು ನಿರ್ಧರಿಸಿದ್ದರು. ಎದುರು ದಡ ತಲುಪಿ ಹಿಂದಿರುಗುವಾಗ, ಅನೀಶ್ ಕಾಲುಗಳ ಸೆಳೆತದಿಂದಾಗಿ ಮಧ್ಯದಲ್ಲಿ ಮುಳುಗಲು ಪ್ರಾರಂಭಿಸಿದರು.
ತಿರುವನಂತಪುರಂನ ಪೀಪಲ್ಸ್ ನಗರದ ಮೂಲದ ಬಿಪಿನ್ ಬಾಸಿಲ್, 10ನೇ ತರಗತಿಯಲ್ಲಿರುವಾಗ ಸಬ್-ಜೂನಿಯರ್ ವಿಭಾಗದಲ್ಲಿ ರಾಜ್ಯ ಚಾಂಪಿಯನ್ ಈಜುಗಾರರಾಗಿದ್ದರು. ಅವರು ಈ ಹಿಂದೆ ತಿರುವನಂತಪುರಂನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಒಂದು ವರ್ಷದ ಹಿಂದೆ ಉದಯನಪುರಂ ಗ್ರಾಮ ಪಂಚಾಯತ್‌ನಲ್ಲಿ ಓವರ್‌ಸಿಯರ್ ಆಗಿ ಸೇರಿಕೊಂಡಿದ್ದರು.