ಬೆಂಗಳೂರು : ನಟಿ ಬಿ. ಸರೋಜಾದೇವಿ ಪುತ್ಥಳಿ ನಿರ್ಮಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಂಸದೆ ಸುಮಲತಾ ಅಂಬರೀಷ್ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಕನ್ನಡ ಚಿತ್ರರಂಗದ ದಿಗ್ಗಜ ನಟಿ, ಭಾರತೀಯ ಚಿತ್ರರಂಗದ ಖ್ಯಾತನಾಮರಾದ ಶ್ರೀಮತಿ ಬಿ. ಸರೋಜಾದೇವಿ ಅವರು ದಿನಾಂಕ 14 ಜುಲೈ 2025 ರಂದು ನಮ್ಮನ್ನು ಅಗಲಿದ್ದಾರೆ. ಅವರ ನಿಧನವು ಕರ್ನಾಟಕಕ್ಕೆ ಮಾತ್ರವಲ್ಲ, ಭಾರತೀಯ ಚಿತ್ರರಂಗಕ್ಕೆ ಸಹ ತುಂಬಲಾರದ ನಷ್ಟವಾಗಿದೆ. ಸರೋಜಾದೇವಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ತಮ್ಮ ಅಭಿನಯದ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ‘ಕಿತ್ತೂರು ಚೆನ್ನಮ್ಮ’, ‘ಅಮರಶಿಲ್ಪಿ ಜಕಣಾಚಾರಿ’, ‘ಭಾಗ್ಯವಂತರು’ ‘ಶ್ರೀನಿವಾಸಕಲ್ಯಾಣ’ ‘ಜಗಜ್ಯೋತಿ ಬಸವೇಶ್ವರ’ ಮುಂತಾದ ಚಿತ್ರಗಳ ಮೂಲಕ ಕನ್ನಡ ಸಂಸ್ಕೃತಿ, ಇತಿಹಾಸ ಮತ್ತು ಮೌಲ್ಯಗಳನ್ನು ಜನಮಾನಸಕ್ಕೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳು, ಹಾಗೂ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ.
ಅವರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ, ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಶ್ರೀಮತಿ ಬಿ. ಸರೋಜಾದೇವಿ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕೆಂದು ಮತ್ತು ಬೆಂಗಳೂರಿನ ಯಾವುದಾದರೂ ಪ್ರಮುಖ ರಸ್ತೆ ಅಥವಾ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿ ಶ್ರೀ Siddaramaiah ಅವರಲ್ಲಿ ವಿನಂತಿಸುತ್ತೇನೆ. ಇದು ಅವರ ಸಾಧನೆಗೆ ಸೂಕ್ತ ಗೌರವವನ್ನು ಸಲ್ಲಿಸುವುದರ ಜೊತೆಗೆ, ಕರ್ನಾಟಕದ ಯುವ ಪೀಳಿಗೆಗೆ ಅವರ ಕೊಡುಗೆಯನ್ನು ಪರಿಚಯಿಸುವ ಸಂಕೇತವಾಗಿರುತ್ತದೆ. ದಯವಿಟ್ಟು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಶ್ರೀಮತಿ ಬಿ. ಸರೋಜಾದೇವಿ ಅವರ ಸ್ಮರಣಾರ್ಥವಾಗಿ ಈ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳಲು ಆದೇಶಿಸಬೇಕೆಂದು ಕೋರುತ್ತೇನೆ ಎಂದು ಸುಮಲತಾ ಅಂಬರೀಷ್ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
