ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರು ಬಳಸಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆರೋಪಿ ಐಶ್ವರ್ಯಾ ಗೌಡ ಮತ್ತು ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ಸ್ಥಳಗಳ ಮೇಲೆ ಗುರುವಾರ ದಾಳಿ ಮಾಡಿ ಶೋಧ ನಡೆಸಿದ್ದಾರೆ.
ನಂತರದಲ್ಲಿ ವಿಚಾರಣೆ ವೇಳೆ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಐಶ್ವರ್ಯಾ ಗೌಡ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಐಶ್ವರ್ಯಾ ಗೌಡಗೆ ಸೇರಿದ ಬೆಂಗಳೂರು ಮತ್ತು ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ನಿವಾಸ, ವಿನಯ್ ಕುಲಕರ್ಣಿ ಅವರ ಬೆಂಗಳೂರು ನಿವಾಸದಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಮತ್ತು ಬ್ಯಾಂಕ್ ವಹಿವಾಟು ಸೇರಿ ಇತರೆ ಮಾಹಿತಿ ಸಂಗ್ರಹಿಸಿದ್ದಾರೆ.
ಡಿ.ಕೆ. ಸುರೇಶ್ ಹೆಸರು ಹೇಳಿಕೊಂಡು ಹಲವರಿಗೆ ಐಶ್ವರ್ಯಾ ಗೌಡ ವಂಚಿಸಿದ ಆರೋಪವಿದೆ. ಬೆಂಗಳೂರಿನ ವಾರಾಹಿ ಗೋಲ್ಡ್ ಮಾಲಕಿ ವನಿತಾ ಅವರಿಗೂ ವಂಚಿಸಿದ್ದಾರೆ. ವನಿತಾ ಪೊಲೀಸರಿಗೆ ದೂರು ನೀಡಿದ್ದು, ಮಂಡ್ಯದಲ್ಲಿಯೂ ಐಶ್ವರ್ಯಾ ಗೌಡ ವಿರುದ್ಧ ದೂರು ದಾಖಲಾಗಿವೆ. ಐಶ್ವರ್ಯಾ ಗೌಡಗೆ ಸೇರಿದ ಕಾರ್ ಬಳಸಿದ ಕಾರಣ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ನಿವಾಸದಲ್ಲಿಯೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.