ಬೆಂಗಳೂರು: ನಿರ್ಮಾಪಕಿ ಅನುಮತಿ ಇಲ್ಲದೇ ಕಿಡಿಗೇದಿಗಳು ಸಹಿ ಫೋರ್ಜರಿ ಮಾಡಿ ನಟ ವಿಷ್ಣುವರ್ಧನ್ ಅಭಿನಯದ ಸಿನಿಮಾಗಳನ್ನು ಯೂಟ್ಯೂಬ್ ಹಾಗೂ ಒಟಿಟಿ ಸೇರಿದಂತೆ ಇತರ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗೆ ಹಂಚಿಕೆ ಮಾಡಿರುವ ಘಟನೆ ನಡೆದಿದೆ.
ಇದರಿಂದಾಗಿ ನಿರ್ಮಾಪಕಿ ಕೋಟಿ ಕೋಟಿ ನಷ್ಟ ಅನುಭವಿಸುತ್ತಿದ್ದು, ಖ್ಯಾತ ನಿರ್ಮಾಪಕಿ ಲಕ್ಷ್ಮೀ ವೆಂಕಟೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಸಹಿಯನ್ನು ನಕಲಿ ಮಾಡಿ ಹಣ ನೀಡಿ ಸಿನಿಮಾ ಖರೀದಿ ಮಾಡಿರುವವರಂತೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಆರೋಪಿಗಳಿಂದಾಗಿ ಒಂದು ಕೋಟಿ ನಷ್ಟವುಂಟಾಗಿದೆ ಎಂಡು ನಿರ್ಮಾಪಕಿ ದೂರಿದ್ದಾರೆ.
ನಟ ವಿಷ್ಣುವರ್ಧನ್ ಅಭಿನಯದ ಗಂಡುಗಲಿ ರಾಮ ಸಿನಿಮಾವನ್ನು ಲಕ್ಷ್ಮೀ ವೆಂಕಟೇಶ್ ಮಾಲಿಕತ್ವದ ಮಮತಾ ಮೂವೀಸ್ ಬ್ಯಾನರ್ ಅಡಿ ನಿರ್ಮಾಣವಾಗಿತ್ತು. ಇದರ ಜೊತೆ ನಟ ಅಶೋಕ್, ಆರತಿ ಅಭಿನಯದ ಗಣೇಶ ಮಹಿಮೆ ಸೇರಿದಂತೆ ಮೂರು ಸಿನಿಮಾಗಳನ್ನು ಖರೀದಿ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ ಎಂದು ನಿರ್ಮಾಪಕಿ ಆರೋಪಿಸಿದ್ದಾರೆ.
ನಿರ್ಮಾಪಕಿ ಲಕ್ಷ್ಮೀ ವೆಂಕಟೇಶ್ ಅವರ ನಕಲಿ ವಿಳಾಸ, ನಕಲಿ ಚೆಕ್, ನಕಲಿ ದಾಖಲೆಗಳನ್ನು ಸೃಷ್ಟಿಸಿ ಚಿತ್ರ ಮಾರಾಟ ಮಾಡಲಾಗಿದೆ. ಎ.ಎನ್.ಜಗದೀಶ್, ಪುರುಷೋತ್ತಮ್, ರಸೂಲ್ ಎಂಬುವವರು ಈ ಕೃತ್ಯವೆಸಗಿದ್ದಾರೆ ಎಂದು ದೂರಿದ್ದಾರೆ. ಸದ್ಯ ಸದಾಶಿವನಗರ ಠಾಣೆಯಲ್ಲಿ ನಿರ್ಮಾಪಕಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.