ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳು, ಮಾವುತರು, ಕಾವಾಡಿಗಳ ಜೊತೆಗೆ ಅರಣ್ಯಾಧಿಕಾರಿಗಳನ್ನು ಒಳಗೊಂಡಂತೆ ಅರಣ್ಯ ಇಲಾಖೆಯಿಂದ 2.04 ಕೋಟಿ ರೂಪಾಯಿ ವಿಮೆ ಮಾಡಿಸುವ ಮೂಲಕ ಆರ್ಥಿಕ ಭದ್ರತೆ ಒದಗಿಸಲಾಗಿದೆ.
ದಸರಾ ಮಹೋತ್ಸವದಲ್ಲಿ 14 ಆನೆಗಳು, ಅವುಗಳ ಮಾವುತರು ಮತ್ತು ಕಾವಾಡಿಗರು ತಲಾ 14 ಮಂದಿ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಒಟ್ಟು 43 ಜನರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.
ಗಜ ಪಯಣದಿಂದ ಜಂಬೂ ಸವಾರಿ ಪೂರ್ಣಗೊಳಿಸಿ ವಾಪಸ್ ಕಾಡಿಗೆ ತೆರಳುವವರೆಗೆ ವಿಮೆ ಸೌಲಭ್ಯ ಜಾರಿಯಲ್ಲಿರುತ್ತದೆ. ಇದಕ್ಕಾಗಿ ಜಿಲ್ಲಾಡಳಿತದ ವತಿಯಿಂದ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗೆ 67,000 ರೂ. ಪ್ರೀಮಿಯಂ ಪಾವತಿಸಲಾಗಿದೆ.
ಅಂಬಾರಿ ಹೊರುವ ಅಭಿಮನ್ಯು ಆನೆ ಸೇರಿದಂತೆ ಎಲ್ಲಾ ಗಂಡಾನೆಗಳಿಗೆ ತಲಾ 5 ಲಕ್ಷ ರೂಪಾಯಿ ಸೇರಿ 50 ಲಕ್ಷ ರೂಪಾಯಿ ವಿಮೆ ಮಾಡಿಸಲಾಗಿದೆ. ಹೆಣ್ಣಾಣೆಗಳಾದ ರೂಪಾ, ಕಾವೇರಿ, ಹೇಮಾವತಿ, ಲಕ್ಷ್ಮಿ ಆನೆಗಳಿಂದ 18 ಲಕ್ಷ ರೂಪಾಯಿ ವಿಮೆ ಮಾಡಿಸಲಾಗಿದೆ. ಸಿಬ್ಬಂದಿ, ಕಾವಡಿಗರು, ಮಾವುತರು, ವಿಶೇಷ ಮಾವುತರು, ಸಹಾಯಕರು, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯ ಅಧಿಕಾರಿ, ಪಶುವೈದ್ಯಾಧಿಕಾರಿ, ಸಹಾಯಕರು ಸೇರಿ ಒಟ್ಟು 43 ಮಂದಿಗೆ 86 ಲಕ್ಷ ರೂಪಾಯಿ ವಿಮೆ ಮಾಡಿಸಲಾಗಿದೆ.
ದಸರಾ ಆನೆಗಳಿಂದ ಸಾರ್ವಜನಿಕರಿಗೆ ತೊಂದರೆಯಲ್ಲಿ, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ದಸರಾ ಆನೆಗಳಿಂದ ನಷ್ಟವಾದರೂ ಇದಕ್ಕೆ 50 ಲಕ್ಷ ರೂ. ವಿಮೆ ಪರಿಹಾರ ಸಿಗಲಿದೆ ಎಂದು ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಮಾಹಿತಿ ನೀಡಿದ್ದಾರೆ.