ಹಾವೇರಿ: ಹಾವೇರಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿ 40 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಕರಕಲಾಗಿದೆ. ಇದರಿಂದಾಗಿ 7 ಜನ ರೈತರಿಗೆ ಅಪಾರ ಹಾನಿಯಾಗಿದ್ದು, ಕಂಗಾಲಾಗಿದ್ದಾರೆ.
ಜಮೀನುಗಳಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಗದ್ದೆಗಳಿಗೆ ಬೆಂಕಿ ತಗುಲಿದೆ. ಕ್ಷಣಮಾತ್ರದಲ್ಲಿ ಬೆಂಕಿ ಪಕ್ಕದ ಗದ್ದೆಗಳಿಗೂ ವ್ಯಾಪಿಸಿದ್ದು, 40 ಎಕರೆ ಪ್ರದೇಶದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ. ಸತ್ಯನಾರಾಯಣ ರಟ್ಟಿಹಳ್ಳಿ, ಕೃಷ್ಣಪ್ಪ, ಚನ್ನಪ್ಪ, ವಿರೂಪಾಕ್ಷಪ್ಪ ಸೇರಿದಂತೆ 7 ಜನ ರೈತರಿಗೆ ಸೇರಿದ ಕಬ್ಬಿನ ಬೆಳೆ ಸಂಪೂರ್ಣ ಹಾನಿಯಾಗಿದೆ.
ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ, ರೈತರು, ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಹರಸಾಹಸ ನಡೆಸಿದ್ದಾರೆ. ಕೊನೆಗೆ ಸತತ ಪ್ರಯತ್ನದಿಂದ ಬೆಂಕಿಯನ್ನು ನಿಯಂತ್ರಿಸಲಾಗಿದೆ.
