ಬೆಂಗಳೂರು : ಬೆಂಗಳೂರಲ್ಲಿ ಅಕ್ರಮವಾಗಿ ಫ್ಲೆಕ್ಸ್ ಅಳವಡಿಸಿದರೆ ಎಫ್ ಐ ಆರ್ ದಾಖಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಅನಧಿಕೃತ ಜಾಹೀರಾತು ಅಳವಡಿಸುವವರ ಮೇಲೆ ಕ್ರಮ ಕೈಗೊಳ್ಳಲು ಹೊಸದಾಗಿ ಸುತ್ತೋಲೆ ಹೊರಡಿಸಲಾಗುತ್ತಿದೆ. ಅದರಲ್ಲಿ ವಾರ್ಡ್ ವ್ಯಾಪ್ತಿಗೆ ಬರುವ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ), ಸಹಾಯಕ ಇಂಜಿನಿಯರ್ (ಎಇ) ಹಾಗೂ ಕಿರಿಯ ಇಂಜಿನಿಯರ್‌ಗೆ (ಜೆಇ) ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಹಾಗೂ ಎಫ್ ಐಆರ್ ದಾಖಲಿಸುವ ಅಧಿಕಾರ ನೀಡಲಾಗುವುದು. ಜತೆಗೆ ತೆರವುಗೊಳಿಸುವ ವೆಚ್ಚವನ್ನೂ ವಸೂಲಿ ಮಾಡುವುದು, ದುಪ್ಪಟ್ಟು ದಂಡ ವಿಧಿಸುವ ಜವಾಬ್ದಾರಿ ನೀಡಲಾಗುವುದು ಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.