ಮಂಡ್ಯ: ಫೈನಾನ್ಸ್ ನವರ ಕಿರುಕುಳಕ್ಕೆ ನೊಂದು ಪ್ರೇಮಾ ಎಂಬ ಮಹಿಳೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಾಲ್ಕು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿತ್ತು. ತಾಯಿ ಸಾವಿನಿಂದ ಆಘಾತಕ್ಕೊಳಗಾದ ಮಗ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
31 ವರ್ಷದ ರಂಜಿತ್ ಆತ್ಮಹತ್ಯೆಗೆ ಶರಣಾಗಿರುವ ಮಗ. ಹಲಗೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 4 ದಿನಗಳ ಹಿಂದೆ ರಂಜಿತ್ ತಾಯಿ ಪ್ರೇಮಾ ಸಾಲಗಾರರ ಕಿರುಕುಳಕ್ಕೆ ನೊಂದು ಮಾತ್ರೆ ಸೇವಿಸಿ ಸಾವಿಗೆ ಶರಣಾಗಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ರಂಜಿತ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 2-3 ದಿನಗಳ ಹಿಂದೆಯೇ ರಂಜಿತ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆತನ ಶವ ಕೊಳೆತ ಸ್ಥಿತಿಯಲ್ಲಿ ಇಂದು ಕೆರೆಯಲ್ಲಿ ಪತ್ತೆಯಾಗಿದೆ.
ರಂಜಿತ್ ಅನಾರೋಗ್ಯ ಹಾಗೂ ಅಂಗವೈಕಲ್ಯದಿಂದಲೂ ಬಳಲುತ್ತಿದ್ದರು. ಇದರ ಜೊತೆಗೆ ತಾಯಿ ಸಾವು ಆಘಾತ ತಂದಿತ್ತು. ಇದರಿಂದ ನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.