ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಆನವೇರಿಯಲ್ಲಿ ‘ಸು ಫ್ರಂ ಸೋ’ ಸಿನಿಮ ನೋಡಲು ಹೋಗಿದ್ದ ವೇಳೆ ಸೀಟಿಗಾಗಿ ಜಗಳವಾಗಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಆನವೇರಿಯ ಶ್ರೀದೇವಿ ಚಿತ್ರಮಂದಿರದಲ್ಲಿ ‘ಸು ಫ್ರಂ ಸೋ’ ಸಿನಿಮಾ ನೋಡಲು ಸ್ಥಳೀಯ ಕಾಂಗ್ರೆಸ್ ಮುಖಂಡ ಶಿವಲಿಂಗಪ್ಪ ಮತ್ತು ಅವರ ಕುಟುಂಬದವರು ಆನ್ಲೈನ್ ನಲ್ಲಿ 9 ಟಿಕೆಟ್ ಬುಕ್ ಮಾಡಿಕೊಂಡು ಚಿತ್ರಮಂದಿರಕ್ಕೆ ಹೋಗಿದ್ದಾರೆ. ತಾವು ಬುಕ್ ಮಾಡಿದ ಸೀಟುಗಳಲ್ಲಿ ಬೇರೆಯವರು ಕುಳಿತಿರುವುದನ್ನು ಕಂಡು ಸೀಟುಗಳನ್ನು ಬಿಟ್ಟು ಕೊಡುವಂತೆ ಕೇಳಿದ್ದಾರೆ.
ಈ ವೇಳೆ ಆ ಸೀಟುಗಳಲ್ಲಿ ಕುಳಿತಿದ್ದ ಹೋಂ ಗಾರ್ಡ್ ಅಧಿಕಾರಿ ಸುನಿಲ್ ಕುಮಾರ್ ಮತ್ತು ಸ್ನೇಹಿತರು ತಕರಾರು ಮಾಡಿದ್ದಾರೆ. ಶಿವಲಿಂಗಪ್ಪ ಕುಟುಂಬದವರು ಚಿತ್ರಮಂದಿರದ ಮಾಲೀಕ ಕಿರಣ್ ಗೌಡರಿಗೆ ವಿಷಯ ತಿಳಿಸಿದ್ದು, ಇಬ್ಬರಿಗೂ ಸೀಟು ವ್ಯವಸ್ಥೆ ಮಾಡುವ ಸಂದರ್ಭದಲ್ಲಿ ಸುನಿಲ್ ಕುಮಾರ್ ಮತ್ತು ಶಿವಲಿಂಗಪ್ಪ ನಡುವೆ ಜಗಳವಾಗಿದೆ.
ಈ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಶಿವಲಿಂಗಪ್ಪ ಜಾತಿ ನಿಂದನೆ ದೂರು ನೀಡಿದ್ದಾರೆ. ಸುನಿಲ್ ಕುಮಾರ್ ಮತ್ತು ಕಿರಣ್ ಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.